ಕುಸಿಯುತ್ತಿದೆ ಭಾರತದ ಷೇರು ಮಾರುಕಟ್ಟೆ…
ಸಾಂದರ್ಭಿಕ ಚಿತ್ರ | PC : freepik.com
ಷೇರು ಮಾರುಕಟ್ಟೆಯಲ್ಲಿ ಈಗ ಕುಸಿತದ ಹೊಸ ದಾಖಲೆ ಸೃಷ್ಟಿಯಾಗಿದೆ. 70 ವರ್ಷಗಳಲ್ಲಿ ಏನೂ ಆಗಲಿಲ್ಲ ಎಂದು ರಾಜಕೀಯ ಮಾಡುವ ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ, ನಿಫ್ಟಿ ಷೇರುಗಳು 30 ವರ್ಷ ಮತ್ತು 35 ವರ್ಷಗಳ ದಾಖಲೆಗಳನ್ನು ನೋಡುವಂಥ ಮಟ್ಟಕ್ಕೆ ಕುಸಿದಿವೆ.
ನಿಫ್ಟಿಯ 35 ವರ್ಷಗಳ ಇತಿಹಾಸದಲ್ಲಿ, ಇಲ್ಲಿಯವರೆಗೆ ಎರಡು ಬಾರಿ ಮಾತ್ರ 1990 ಮತ್ತು 96ರಲ್ಲಿ ಕುಸಿದಿದೆ. ಮಾಸಿಕ ಕುಸಿತದ ದೃಷ್ಟಿಯಿಂದ ನೋಡಿದರೆ, ನಿಫ್ಟಿ ತನ್ನ ಎರಡನೇ ಅತಿ ದೀರ್ಘಾವಧಿಯ ಕುಸಿತದಲ್ಲಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಬರೆದಿದೆ.
1996 ರಂತೆಯೇ ಆರ್ಥಿಕ ಹಿಂಜರಿತದ ದಿಗಿಲು ಕಾಣಿಸತೊಡಗಿದೆ. ಫೆಬ್ರವರಿ 28 ರಂದು ಆರಂಭದಲ್ಲೇ ಸೆನ್ಸೆಕ್ಸ್ 1000 ಪಾಯಿಂಟ್‌ಗಳಿಗಿಂತ ಕಡಿಮೆಯಾಯಿತು. ಒಂದೇ ಏಟಿಗೆ ಹೂಡಿಕೆದಾರರು 6 ಲಕ್ಷ ಕೋಟಿ ನಷ್ಟಕ್ಕೊಳಗಾದರು. ಮಧ್ಯಾಹ್ನ 1:30 ರ ಹೊತ್ತಿಗೆ ಸೆನ್ಸೆಕ್ಸ್ 14 ಪಾಯಿಂಟ್‌ಗಳಷ್ಟು ಕುಸಿದಿತ್ತು. ಮಧ್ಯಾಹ್ನ 3 ರ ಹೊತ್ತಿಗೆ ಸುಧಾರಣೆಯ ನಂತರವೂ, ಸೆನ್ಸೆಕ್ಸ್ 1327 ಪಾಯಿಂಟ್‌ಗಳಿಗಿಂತ ಕಡಿಮೆಯಾಗಿತ್ತು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ನಿಫ್ಟಿ 400 ಪಾಯಿಂಟ್‌ಗಳಷ್ಟು ಕುಸಿಯಿತು.
ಮಾಧ್ಯಮ ವರದಿಗಳ ಪ್ರಕಾರ, ಸುಮಾರು ಹೂಡಿಕೆದಾರರು 8 ಲಕ್ಷ ಕೋಟಿ ಕಳೆದುಕೊಳ್ಳುವಂತಾಯಿತು. ಸೆನ್ಸೆಕ್ಸ್ ಮುಳುಗುತ್ತಲೇ ಇದೆ ಮತ್ತು ಮಡಿಲ ಮೀಡಿಯಾ ಮೌನವಾಗಿದೆ.
ಅದು ಏಕೆ ಮೌನವಾಗಿದೆ? ಯಾರಿಗೂ ತಿಳಿದಿಲ್ಲ. ನೆಹರು ಅವರ ತಪ್ಪುಗಳಿಂದಾಗಿ ಇಂದು ಮಾರುಕಟ್ಟೆಯ ಸ್ಥಿತಿ ಹೀಗಿದೆ ಎಂದು
ನೆಹರು ಅವರ ಹೆಸರನ್ನು ತೆಗೆದುಕೊಂಡು ಪ್ರಶ್ನೆಯನ್ನು ಕೇಳಬೇಕೇನೊ?
ಶಕ್ತಿಕಾಂತ ದಾಸ್ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ನಿವೃತ್ತಿಯ ನಂತರ ಪಿಎಂಒ ಗೆ ನೇಮಕಗೊಂಡರು. ಅವರನ್ನು ಎರಡನೇ ಪ್ರಿನ್ಸಿಪಲ್ ಸೆಕ್ರೆಟರಿಯನ್ನಾಗಿ ಮಾಡಲಾಯಿತು. ಗವರ್ನರ್ ಆಗುವ ಮೊದಲೇ ಅವರು ಕಂದಾಯ ಕಾರ್ಯದರ್ಶಿಯಾಗಿದ್ದರು. ಈಗ ಈ ನೇಮಕಾತಿಯೊಂದಿಗೆ, ಆರ್‌ಬಿಐನ ಸ್ವಾಯತ್ತತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಗವರ್ನರ್ ಹುದ್ದೆಯಲ್ಲಿದ್ದಾಗಿನ ಅವರ ಅನುಭವ ಈ ಬಿಕ್ಕಟ್ಟಿನ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಅವರನ್ನು ಹೊಗಳಲಾಗುತ್ತಿದೆ. ಪ್ರಧಾನಿ ಅಧಿಕಾರಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಅವರು ಈ ಹುದ್ದೆಯನ್ನು
ಹೊಂದಿರುತ್ತಾರೆ ಎಂದು ಅವರ ನೇಮಕಾತಿ ಪತ್ರದಲ್ಲಿ ಹೇಳಲಾಗಿದೆ. ಆದರೆ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದವರು ಸೀದಾ ಬಂದು ಪ್ರಧಾನಿಯ ಕಾರ್ಯದರ್ಶಿ ಹೇಗಾದರು ಎಂದು ಕೇಳುವವರೇ ಇಲ್ಲ
ಮಾರುಕಟ್ಟೆಯಲ್ಲಿ ರಕ್ತಪಾತವಿಲ್ಲದ ಒಂದು ದಿನವೂ ಇಲ್ಲ ಎನ್ನುವ ಹಾಗಾಗಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇದು ಸಂಭವಿಸಿದ್ದರೆ, ಪತ್ರಿಕೆಗಳ ಮುಖಪುಟಗಳಲ್ಲೇ ಷೇರು ಮಾರುಕಟ್ಟೆಯ ಕುಸಿತದ ಸುದ್ದಿಗಳು ಕಣ್ಣಿಗೆ ರಾಚುತ್ತಿರುತ್ತಿದ್ದವು. ಆದರೆ ಈಗ ಮಡಿಲ ಮೀಡಿಯಾಗಳು ಹಾಗು ಭಟ್ಟಂಗಿ ಆಂಕರ್ ಗಳ ಬಾಯಿಗೆ ಬೀಗ ಬಿದ್ದಿದೆ. ಜನ ಈ ಪರಿ ದುಡ್ಡು ಕಳಕೊಳ್ಳುತ್ತಿರುವಾಗಲೂ ಆ ಆಂಕರ್ ಗಳು ಸರಕಾರಕ್ಕೆ ಪ್ರಶ್ನೆ ಕೇಳೋದನ್ನೇ ಮರೆತಿದ್ದಾರೆ.
ಜನರ ಬಂಡವಾಳದ ಶೇ. 40 ರಷ್ಟು ಮುಳುಗಿದೆ. ಇನ್ನಾರದ್ದೋ ಬಂಡವಾಳ ಶೇ. 50 ರಷ್ಟು ಮುಳುಗಿದೆ. ಇನ್ನೂ ಎಷ್ಟು ಮುಳುಗಲಿದೆ ಎಂಬುದನ್ನು ಯಾರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಅಮೃತ ಕಾಲದಲ್ಲಿ ತಮ್ಮ ಬಂಡವಾಳ ಮುಳುಗಿದಾಗ ಜನರು ಹೇಗೆ ಮೌನವಾಗಿರುತ್ತಾರೆ ಮತ್ತು ಅವರು ಎಷ್ಟು ಕಾಲ ಮೌನವಾಗಿರುತ್ತಾರೆ?
ಹಣ ಎಲ್ಲಿಗೆ ಹೋಗಿದೆ, ತನ್ನ ಷೇರುಗಳನ್ನು ಮಾರಾಟ ಮಾಡಿದ ನಂತರ ಯಾರು ಓಡಿಹೋಗುತ್ತಿದ್ದಾರೆ, ಏಕೆ ಓಡಿಹೋಗುತ್ತಿದ್ದಾರೆ ಯಾವುದೂ ಅರ್ಥವಾಗುತ್ತಿಲ್ಲ. 2015 ರಲ್ಲಿ ಮೋದಿ ಸರ್ಕಾರವನ್ನು ಹೊಗಳುವ ಲೇಖನಗಳು ಇರುತ್ತಿದ್ದವು. ಭಾರತ ವ್ಯಾಪಾರ ರಾಷ್ಟ್ರವಾಗಿದೆ ಎಂದು ಬರೆಯುವವರು ಹೂಡಿಕೆದಾರರ ಜಾಗೃತಿ ಹೆಚ್ಚುತ್ತಿದೆ ಎಂದು ಹೇಳಲು ಶುರು ಮಾಡಿದರು. ಡಿಜಿಟಲ್ ಇಂಡಿಯಾ ನಡೆಯುತ್ತಿದೆ ಎಂದರು.
ಭಾರತದ ಮಾರುಕಟ್ಟೆ ಜಾಗತಿಕ ಮಾರುಕಟ್ಟೆಗೆ ಸಂಪರ್ಕಗೊಳ್ಳುತ್ತಿದೆ. ಭಾರತದ ಆರ್ಥಿಕತೆ ಹೊಳೆಯುತ್ತಿದೆ ಎನ್ನಲಾಯಿತು.
ಈಗ, ಸೆಪ್ಟೆಂಬರ್‌ನಲ್ಲಿ ಕಂಡಿದ್ದ ಮಾರುಕಟ್ಟೆ ಆಘಾತ ಫೆಬ್ರವರಿ ವೇಳೆಗೆ ಭಯಾನಕವಾಗಿ ಮಾರ್ಪಟ್ಟಿದೆ. 2015ರಲ್ಲಿ ಬಂದಂಥ ವರದಿಗಳು ಈಗ ಗೋಚರಿಸುವುದಿಲ್ಲ. ಇದನ್ನು ವ್ಯಾಪಾರ ರಾಷ್ಟ್ರ ಎಂದು ಕರೆಯುವವರು ಮುಳುಗುತ್ತಿರುವ ಮಾರುಕಟ್ಟೆಯ ಬಗ್ಗೆ ಬರೆಯಲಾರರು.
ಒಂದೇ ಕುಂಭಮೇಳದಿಂದ 4 ಲಕ್ಷ ಕೋಟಿ ರೂ ಗಳ ವ್ಯವಹಾರ ನಡೆಯುತ್ತದೆ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಭಾರತದಲ್ಲಿ ಒಂದೇ ಕುಂಭಮೇಳದಲ್ಲಿ 4 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿರುವಾಗ, ಕಂಪೆನಿಗಳ ಒಳ್ಳೆಯ ದಿನಗಳು ಮರಳುತ್ತಿವೆ ಎಂಬ ವಿಶ್ವಾಸ ಇರಬೇಕಲ್ಲವೆ? ಹಾಗಾದರೆ ಭಾರತೀಯ ವ್ಯವಹಾರದಲ್ಲಿ ವಿದೇಶಿ ಹೂಡಿಕೆದಾರರ ವಿಶ್ವಾಸ ಏಕೆ ಅಲುಗಾಡುತ್ತಿದೆ? ವಿದೇಶಿ ಹೂಡಿಕೆದಾರರು ಪ್ರಚಾರದ ಆಟವನ್ನು ಅರ್ಥಮಾಡಿಕೊಂಡು ತಮ್ಮ ಚೀಲ ಎತ್ತಿಕೊಂಡು ಏಕೆ ಓಡಿಹೋಗುತ್ತಿದ್ದಾರೆ?
ಬಲೂನ್ ಗಾಳಿಯಿಂದ ತುಂಬಿದೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಕಂಪೆನಿಗಳ ಮೌಲ್ಯಮಾಪನಗಳನ್ನು ಉತ್ಪ್ರೇಕ್ಷಿಸಲಾಗಿರುವುದನ್ನು ತಿಳಿದಿದ್ದಾರೆ. ಹಾಗಿದ್ದಲ್ಲಿ ಇದು ಭಾರತದ ಬೆಳವಣಿಗೆಯ ಕಥೆ ಕೆಳಮುಖವಾಗುತ್ತಿದೆ ಎಂಬುದರ ಸೂಚನೆ.
ದೇಶೀಯ ಹೂಡಿಕೆದಾರರ ಬಲದ ಮೇಲೆ ಈ ಮಾರುಕಟ್ಟೆಯನ್ನು ಎಷ್ಟು ಕಾಲ ಉಳಿಸಬಹುದು? ಡಾಲರ್‌ಗಳನ್ನು ಖರೀದಿಸುವ ಮೂಲಕ ರಿಸರ್ವ್ ಬ್ಯಾಂಕ್ ಎಷ್ಟು ಕಾಲ ರೂಪಾಯಿಯನ್ನು ಕುಸಿತದಿಂದ ಪಾರು ಮಾಡಬಹುದು? ತಕ್ಷಣಕ್ಕೆ ಯಾವುದೇ ಆಶಾಕಿರಣ ಕಾಣುತ್ತಿಲ್ಲ. ಸಣ್ಣ ಮತ್ತು ಮಧ್ಯಮ ಬಂಡವಾಳ ಷೇರುಗಳು ಕುಸಿಯುತ್ತಿವೆ. ಅವುಗಳ ಮಾರಾಟ ನಿಲ್ಲುತ್ತಿಲ್ಲ.
ವಿದೇಶಿ ಹೂಡಿಕೆದಾರರು ಹಣವನ್ನು ಹಿಂಪಡೆಯುತ್ತಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್‌ನಲ್ಲಿ ಪತ್ರಕರ್ತೆ ವೀಣಾ ವೇಣುಗೋಪಾಲ್ ಬರೆದಿದ್ದಾರೆ.
ಭಾರತೀಯ ಮಾರುಕಟ್ಟೆ ದೇಶೀಯ ಹೂಡಿಕೆದಾರರಿಂದ ಉತ್ತೇಜಿಸಲ್ಪಡುತ್ತಿದೆ. ಆದರೆ ಮಾರುಕಟ್ಟೆ ಮತ್ತಷ್ಟು ಕುಸಿಯುತ್ತಲೇ ಇದ್ದರೆ, ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳು ಮತ್ತು SIP ಗಳಿಂದ ಹಣವನ್ನು ಹಿಂಪಡೆಯಲು ಪ್ರಾರಂಭಿಸುತ್ತಾರೆ ಮತ್ತು
ಅವುಗಳಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸುತ್ತಾರೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ದೇಶೀಯ ಹೂಡಿಕೆದಾರರು ಹೂಡಿಕೆ ಮಾಡುತ್ತಿರುವಾಗ ವಿದೇಶಿ ಹೂಡಿಕೆದಾರರು ಹಣವನ್ನು ಹಿಂಪಡೆಯುತ್ತಿದ್ದಾರೆ ಎಂಬ ವರದಿಗಳಿವೆ.
ಫೆಬ್ರವರಿ 18 ರ ಸುದ್ದಿಯ ಪ್ರಕಾರ, ಕಳೆದ ಒಂದೂವರೆ ತಿಂಗಳಲ್ಲಿ LIC ಯ ಷೇರುಗಳ ಒಟ್ಟು ಮೌಲ್ಯ 84,000 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. 2024ರ ಡಿಸೆಂಬರ್ ತ್ರೈಮಾಸಿಕದಲ್ಲಿ ಪಟ್ಟಿಮಾಡಿದ ಕಂಪೆನಿಗಳಲ್ಲಿ LIC ಮಾಡಿದ ಹೂಡಿಕೆಯ ಒಟ್ಟು ಮೌಲ್ಯ 14.7 ಲಕ್ಷ ಕೋಟಿ ರೂ.ಗಳಷ್ಟಿತ್ತು. ಫೆಬ್ರವರಿ 18 ರ ಹೊತ್ತಿಗೆ ಅದು 13.87 ಲಕ್ಷ ಕೋಟಿ ರೂ.ಗಳಿಗೆ ಇಳಿದಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಎಲ್‌ಐಸಿ ಪಾಲನ್ನು ಹೊಂದಿರುವ ಹಲವು ಕಂಪೆನಿಗಳ ಷೇರುಗಳು ಕುಸಿದಿವೆ ಎಂದು ವರದಿಯಾಗಿದೆ. ಐಟಿಸಿ, ಎಲ್ & ಟಿ ಮತ್ತು ಎಸ್‌ಬಿಐಗಳಲ್ಲಿ ಅತಿ ದೊಡ್ಡ ಕುಸಿತ ಕಂಡುಬಂದಿದೆ. ಇದರಿಂದಾಗಿ, ಎಲ್‌ಐಸಿ ಐಟಿಸಿಯಲ್ಲಿ ಸುಮಾರು 12,000 ಕೋಟಿ, ಎಲ್ & ಟಿಯಲ್ಲಿ 6,700 ಕೋಟಿ ಮತ್ತು ಎಸ್‌ಬಿಐನಲ್ಲಿ 5,650 ಕೋಟಿ ನಷ್ಟ ಅನುಭವಿಸಿದೆ.
ಈ ರೀತಿಯಾಗಿ ಇತರ ಹಲವು ಕಂಪೆನಿಗಳಲ್ಲಿ 2,000 ಕೋಟಿಯಿಂದ 4,000 ಕೋಟಿ ವರೆಗೆ ಎಲ್‌ಐಸಿ ನಷ್ಟ ಕಂಡಿದೆ. ಮಾರುಕಟ್ಟೆ ಏಕೆ ಮುಳುಗುತ್ತಿದೆ ಎಂದು ಯಾರೂ ಕೇಳುತ್ತಿಲ್ಲ ಅಥವಾ ಹೇಳುತ್ತಿಲ್ಲ. ಎಲ್ಲಾ ಸಮಯದಲ್ಲೂ, ಎರಡು ಮೂರು ಕಾರಣಗಳನ್ನು ಹೇಳಿಬಿಡಲಾಗುತ್ತದೆ. ಅವುಗಳ ಪ್ರಕಾರ, ಸಮಸ್ಯೆಯ ಮೂಲ ಇಲ್ಲಿ ಇಲ್ಲವೇ ಇಲ್ಲ. ಕೆಲವೊಮ್ಮೆ ಟ್ರಂಪ್ ಕಾರಣ ಎನ್ನಲಾಗುತ್ತದೆ.
ಕೆಲವೊಮ್ಮೆ ಯುರೋಪ್, ಕೆಲವೊಮ್ಮೆ ಚೀನಾ, ಕೆಲವೊಮ್ಮೆ ರಷ್ಯಾ.ಆದರೆ ನಮ್ಮ ಮಾರುಕಟ್ಟೆ ಹೇಗೆ ದುರ್ಬಲ ಮತ್ತು ಅಸ್ಥಿರವಾಗಿದೆ ಎಂದು ಯಾರೂ ಹೇಳುವುದಿಲ್ಲ.
ಕಳೆದ ಒಂದು ವರ್ಷದಲ್ಲಿ 80 ಲಕ್ಷ ಕೋಟಿ ರೂಪಾಯಿಗಳು ಬಂದಿವೆ. ಈಗ ನಮ್ಮ ತೆರಿಗೆಗೆ ಪ್ರತಿಯಾಗಿ ಅಮೆರಿಕವೂ ತೆರಿಗೆ ಹಾಕುತ್ತದೆ. ಇದರಿಂದಾಗಿ ಜಿಡಿಪಿಯಲ್ಲಿ ಶೇ. 0.5 ರಿಂದ 0.6 ರಷ್ಟು ಇಳಿಕೆಯಾಗಲಿದೆ. ಭಾರತ ಸರ್ಕಾರ ಸಾರ್ವಜನಿಕವಾಗಿ ಏನನ್ನೂ ಹೇಳುತ್ತಿಲ್ಲ. ಈಗ ಸುದ್ದಿ ಏನೆಂದರೆ, ಯುರೋಪಿಯನ್ ಒಕ್ಕೂಟ ಕಾರುಗಳು ಮತ್ತು ವೈನ್ ಮೇಲಿನ ತೆರಿಗೆ ತಗ್ಗಿಸಲು ಭಾರತದ ಮೇಲೆ ಒತ್ತಡ ಹೇರುತ್ತಿದೆ.
ನಿರ್ಮಲಾ ಸೀತಾರಾಮನ್ ಸೇರಿದಂತೆ ಈ ಸರ್ಕಾರಕ್ಕೆ ತೆರಿಗೆ ಹಾಕುವ ಬಗ್ಗೆ ಈಗಾಗಲೇ ತಿಳಿದಿತ್ತು. ಒಂದೆಡೆ ಜಿಡಿಪಿ ಕುಸಿತ, ಬೆಲೆಯೇರಿಕೆ ಸೇರಿದರೆ ಇನ್ನಷ್ಟು ಕಂಗೆಡುವ ಸ್ಥಿತಿ. ಈ ದೇಶದ ಪರಿಸ್ಥಿತಿ ಏನಾಗಬಹುದು? ದೇಶ ಎಂಥ ಅಪಾಯದತ್ತ ಸಾಗುತ್ತಿದೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ.
ನೋಟ್ ಬ್ಯಾನ್, ಕಳಪೆ ಜಿಎಸ್‌ಟಿ ಮತ್ತು ಈಗ ಈ ತೆರಿಗೆ ಮತ್ತು ಇದಕ್ಕೂ ಮುಂಚಿನ ಯೋಜಿತವಲ್ಲದ ಲಾಕ್‌ಡೌನ್. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ನೋಟ್ ಬ್ಯಾನ್ ನಲ್ಲಿ ಸಂಪೂರ್ಣವಾಗಿ ನಾಶವಾದವು. ಉದ್ಯೋಗಗಳನ್ನು ಒದಗಿಸುವ ಸಣ್ಣ ಕೈಗಾರಿಕೆಗಳು ಸರಿಯಾಗಿ ಪ್ಲ್ಯಾನ್ ಮಾಡದ ಲಾಕ್ ಡೌನ್ ನಲ್ಲಿ ಹೋದವು. ಉಳಿದಿದ್ದ ಸಣ್ಣ ಕೈಗಾರಿಕೆಗಳು ಲಾಕ್ ಡೌನ್ ನಿಂದಾಗಿ ಮುಳುಗಿದವು.
ಈಗ ಹೂಡಿಕೆದಾರರ ಎದುರು ಭಾರತದ ಆರ್ಥಿಕತೆಯ ಸತ್ಯ ಬಟಾ ಬಯಲಾಗುತ್ತಿದೆ. ವರದಿಯ ಪ್ರಕಾರ, ಭಾರತದಲ್ಲಿ ನೂರು ಕೋಟಿ ಜನರ ಬಳಿ ಖರ್ಚು ಮಾಡಲು ಹಣವಿಲ್ಲ. ಇದು ಭಾರತದ ದೊಡ್ಡ ಜನಸಂಖ್ಯೆಯ ಸ್ಥಿತಿ. ಇಂದು ಭಾರತ ಸ್ವಾವಲಂಬಿಯಾಗಿದ್ದರೆ, ಟ್ರಂಪ್ ಬೆದರಿಕೆಯಿಂದಾಗಿ ಮಾರುಕಟ್ಟೆ ಈ ರೀತಿ ಕುಸಿಯುತ್ತಿರಲಿಲ್ಲ. ಜನರ ಬಳಿ ಆಹಾರ ಖರೀದಿಸಲು ಹಣವಿಲ್ಲ ಮತ್ತು ಪ್ರಧಾನಿ ಬೊಜ್ಜಿನ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ. ಅವರನ್ನು ಹೊಗಳುವ ಜನರನ್ನು ಪರಿಣಿತರ ಸಮಿತಿಗೆ ನಾಮನಿರ್ದೇಶನ ಮಾಡುತ್ತಿದ್ದಾರೆ. ಪ್ಲೇಟ್‌ಗಳನ್ನು ಬಾರಿಸುವ ಮೂಲಕ ಕೊರೊನಾ ದೂರವಾಗುತ್ತದೆ, ನಾಮನಿರ್ದೇಶನ ಮಾಡುವ ಮೂಲಕ ಬೊಜ್ಜು ಕಡಿಮೆಯಾಗುತ್ತದೆ, ಎಂಥ ಅವಸ್ಥೆ ಇದು?
ಮಾರುಕಟ್ಟೆ ಏರುತ್ತಿದೆ ಎಂದು ಎಲ್ಲರೂ ಒಂದು ಚಾನ್ಸ್ ನೋಡ ಬಯಸಿದ್ದರು. ಡಿಮ್ಯಾಟ್ ಖಾತೆಗಳನ್ನು ತೆರೆಯುವುದು ಜೋರಾಯಿತು.ಜನರು ಬ್ಯಾಂಕುಗಳಿಂದ ಹಣ ಹಿಂಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು.
2019 ರಲ್ಲಿ 4 ಕೋಟಿ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಯಿತು.2020 ರಲ್ಲಿ 5 ಕೋಟಿ ಖಾತೆಗಳು, 2021 ರಲ್ಲಿ 8 ಕೋಟಿ, 2022 ರಲ್ಲಿ 11 ಕೋಟಿ, 2023 ರಲ್ಲಿ 14 ಕೋಟಿ, ಮತ್ತು 2024 ರಲ್ಲಿ 18 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಯಿತು.
ಜನರು ಮಾರುಕಟ್ಟೆಯ ಕಡೆಗೆ ಎಷ್ಟು ವೇಗವಾಗಿ ಧಾವಿಸುತ್ತಿದ್ದರೆಂದರೆ, ಅಲ್ಲಿ ಹಣದ ಮಳೆ ಬೀಳಲಿದೆ ಎನ್ನುವ ಹಾಗಿತ್ತು. ಆದರೆ ಈಗ ಎಲ್ಲವೂ ಮುಳುಗುತ್ತಿದೆ. ಮಾರುಕಟ್ಟೆ ಏರಿದಾಗ ಕ್ರೆಡಿಟ್ ತೆಗೆದುಕೊಳ್ಳಲು ಬರುವವರು, ಅದು ಮುಳುಗಿದಾಗ ಓಡಿ ಹೋಗುತ್ತಾರೆ. ಮಾರುಕಟ್ಟೆ ಏರಿದಾಗ ಅದು ಮೋದಿಯಿಂದಾಗಿ. ಅದೇ ಬಿದ್ದಾಗ ಅದಕ್ಕೆ ಕಾರಣ ಟ್ರಂಪ್ ಎಂದು ಬೆರಳು ಮಾಡಲಾಗುತ್ತದೆ.
ಆದರೆ ನಡುವೆ, ಹಣ ಕಳೆದುಕೊಂಡವರ ಕಥೆಯನ್ನು ಕೇಳುವುದಕ್ಕೆ ಯಾರಿದ್ದಾರೆ? ಕಳೆದ 5 ದಿನಗಳಲ್ಲಿ, ಸೆನ್ಸೆಕ್ಸ್ ಶೇ.25 ರಷ್ಟು ಕುಸಿಯಿತು. ಕಳೆದ 6 ತಿಂಗಳಲ್ಲಿ ಸೆನ್ಸೆಕ್ಸ್ ಸುಮಾರು ಶೇ.11 ರಷ್ಟು ಕುಸಿಯಿತು. 2024ರ ಸೆಪ್ಟೆಂಬರ್ 27 ರಂದು ಸೆನ್ಸೆಕ್ಸ್ 85,000 ಕ್ಕಿಂತ ಹೆಚ್ಚಾಯಿತು, ಈಗ ಅದು ಈ ವರ್ಷ 73,000 ಕ್ಕಿಂತ ಕಡಿಮೆಯಾಗಿದೆ. ಎರಡು ತಿಂಗಳಲ್ಲಿ ಸೆನ್ಸೆಕ್ಸ್ 6 ಕ್ಕೂ ಹೆಚ್ಚು ಬಾರಿ ಕುಸಿದಿದೆ. ನಿಫ್ಟಿಯ 28-30 ವರ್ಷಗಳ ಕುಸಿತದ ದಾಖಲೆ ಕೂಡ ಮುರಿದಿದೆ.
ಚಿಂತಿಸಬೇಡಿ ಎಂದು ಹಣಕಾಸು ಸಚಿವಾಲಯದಿಂದ ಯಾವುದೇ ಹೇಳಿಕೆ ಬಂದಿಲ್ಲ. ಆದರೆ, ಅಮೆರಿಕದಲ್ಲಿ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರ ಅವರು ಹಣಕಾಸು ಸಚಿವರನ್ನು ಭೇಟಿಯಾದ ಫೋಟೋ ಮಾತ್ರ ಬರುತ್ತದೆ. ಈ ಫೋಟೋವನ್ನು ನೋಡಿಕೊಂಡು ಜನರೇನು ಮಾಡಬೇಕೆಂದು ಯಾರಿಗೂ ತಿಳಿದಿಲ್ಲ.
ಡಾಲರ್ ಎದುರು ರೂಪಾಯಿ ಕುಸಿಯುತ್ತಲೇ ಇದೆ. ಇದು ಉತ್ತಮ ಶಿಕ್ಷಣ ಪಡೆಯಲು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅವರ ಶುಲ್ಕ ಹೆಚ್ಚಾಗುತ್ತದೆ, ಸಾಲ ಪಡೆದು ಕಳುಹಿಸಿದವರ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ವಿದ್ಯಾರ್ಥಿಗಳು ಸಾಲ ಮರುಪಾವತಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಈಗ ವಿದ್ಯಾರ್ಥಿಗಳು ಒಂದು ಕೋಟಿ ಸಾಲಕ್ಕೆ 5 ಲಕ್ಷ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಬರೀ ಮೂರನೇ ದರ್ಜೆಯ ಕಳಪೆ ಕಾಲೇಜುಗಳೇ ತುಂಬಿಹೋಗಿವೆ.
ಶಿಕ್ಷಣದ ಗುಣಮಟ್ಟದ ಮೇಲೆ ಇಲ್ಲಿ ಚರ್ಚೆ ನಡೆಯುವುದಿಲ್ಲ.ಶಿಕ್ಷಣದ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದರೆ ಅವರು ಧರ್ಮವನ್ನು ಭಾಷೆಯೊಂದಿಗೆ ಬೆರೆಸುತ್ತಿದ್ದಾರೆ, ದ್ವೇಷದ ಇಟ್ಟಿಗೆಗಳ ಮೇಲೆ ಸಂಭ್ರಮಿಸುವ ಧಾರ್ಮಿಕ ಅಮಲು ಇದೆ.
ಪ್ರತಿಯೊಬ್ಬ ಉತ್ತಮ ವಿದ್ಯಾರ್ಥಿಯೂ ವಿದೇಶಕ್ಕೆ ಹೋಗಲು ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗಿದೆ, ಸಾಲ ಮಾಡಬೇಕಾಗಿದೆ. ಇದರ ಬಗ್ಗೆ ಯಾವುದೇ ಚರ್ಚೆಯಿಲ್ಲ. ಮಡಿಲ ಮೀಡಿಯಾಗಳು ಕುಂಭಮೇಳದಲ್ಲಿ ಮುಳುಗೇಳುತ್ತಿರುತ್ತವೆ.
ಸ್ನಾನದ ಫೋಟೋಗಳನ್ನು ಪೋಸ್ಟ್ ಮಾಡಲಾಗುತ್ತದೆ.ಹೀಗಿರುವಾಗ, ಕಳೆದುಕೊಂಡ ಹಣದ ಬಗ್ಗೆ, ಆಗಿರುವ ನಷ್ಟದ ಬಗ್ಗೆ ದುಃಖ ತೋಡಿಕೊಳ್ಳಲು ಅವಕಾಶವೆಲ್ಲಿದೆ? ಕಳೆದುಕೊಂಡವರ ಗೋಳು ಕೇಳಲು ಯಾರಿದ್ದಾರೆ?