ಹಾರಾಟ ನಡೆಸದ IndiGo | 84 ವಿಶೇಷ ರೈಲುಗಳನ್ನು ಘೋಷಿಸಿದ ಭಾರತೀಯ ರೈಲ್ವೇ
Photo Credit : PTI
ಹೊಸದಿಲ್ಲಿ, ಡಿ. 6: ಇಂಡಿಗೊ ಅಗಾಧ ಪ್ರಮಾಣದಲ್ಲಿ ವಿಮಾನ ಯಾನವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯ ಎದುರಿಸುತ್ತಿರುವ ಜನರಿಗೆ ನೆರವು ನೀಡಲು ಭಾರತೀಯ ರೈಲ್ವೆ 84 ವಿಶೇಷ ರೈಲುಗಳನ್ನು ಶನಿವಾರ ಘೋಷಿಸಿದೆ.
ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಈ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಹೊಸದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು, ಪಾಟ್ನಾ ಹಾಗೂ ಹೌರಾ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಪ್ರಯಾಣಿಕರ ದಟ್ಟಣೆ ಪರಿಶೀಲಿಸಿದ ಬಳಿಕ ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಬೇಡಿಕೆಗಳಿಗೆ ಅನುಗುಣವಾಗಿ ವಿಶೇಷ ರೈಲುಗಳ ಸಂಖ್ಯೆ ಹೆಚ್ಚಾಗಬಹುದು ಅಧಿಕಾರಿಗಳು ಹೇಳಿದ್ದಾರೆ.
ಲಭ್ಯವಿರುವ ಎಲ್ಲಾ ಸಂಪನ್ಮೂಲಗಳು, ರೈಲುಗಳು ಮತ್ತು ಸಿಬ್ಬಂದಿಯನ್ನು ಬಳಸುವಂತೆ ಎಲ್ಲಾ ವಲಯಗಳಿಗೆ ಸೂಚಿಸಲಾಗಿದೆ. ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗಾಗಿ ರೈಲುಗಳನ್ನು ಸುರಕ್ಷಿತವಾಗಿ ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ರೈಲ್ವೇ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾಹಿತಿ ಹಾಗೂ ಪ್ರಚಾರ) ದಿಲೀಪ್ ಕುಮಾರ್ ತಿಳಿಸಿದ್ದಾರೆ.