ಸುಪ್ರೀಂಕೋರ್ಟ್ ತೀರ್ಪಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ವಿರುದ್ಧದ ಅಭಿಪ್ರಾಯಕ್ಕೆ ಬಹಿರಂಗ ವಿರೋಧ: ಸಿಜೆಐಗೆ ಬಹಿರಂಗ ಪತ್ರ ಬರೆದ ನ್ಯಾಯಾಂಗ ತಜ್ಞರು
ಸುಪ್ರೀಂಕೋರ್ಟ್ |Photo Credit ; .sci.gov.in
ಹೊಸದಿಲ್ಲಿ: ಸುಪ್ರೀಂಕೋರ್ಟ್ ಈ ತಿಂಗಳ 2ರಂದು ನೀಡಿದ ತೀರ್ಪಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಮತ್ತು ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣಾ ಅಭಿಯಾನ (ಸಿಜೆಎಆರ್) ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ 100ಕ್ಕೂ ಹೆಚ್ಚು ನ್ಯಾಯಾಂಗ ತಜ್ಞರು ಮುಖ್ಯ ನ್ಯಾಯಮೂರ್ತಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ರೋಹಿಂಗ್ಯಾ ನಿರಾಶ್ರಿತರು ಕಸ್ಟಡಿಯಿಂದ ಕಣ್ಮರೆಯಾಗಿದ್ದಾರೆ ಎಂದು ಆಪಾದಿಸಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಖ್ಯಾತ ಲೇಖಕಿ, ಚಿಂತಕಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ.ರೀಟಾ ಮಚಾಂಡಾ ಎಂಬವವರು ಅರ್ಜಿ ಸಲ್ಲಿಸಿದ್ದರು.
ಸುಪ್ರೀಂಕೋರ್ಟ್ ಪೀಠ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದದ್ದು. ಯಾವ ಸಂವಿಧಾನ, ನಮ್ಮ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ಕಾನೂನುಗಳು ಯಾವ ನಿರಾಶ್ರಿತರ ಸಮಾನ ಮಾನವೀಯತೆ ಮತ್ತು ಸಮಾನ ಮಾನವಹಕ್ಕುಗಳನ್ನು ರಕ್ಷಿಸಿದೆಯೋ ಅದಕ್ಕೆ ರೋಹಿಂಗ್ಯಾ ನಿರಾಶ್ರಿತರನ್ನು ಅಮಾನವೀಯವಾಗಿಸುವ ಮೂಲಕ ಧಕ್ಕೆಯಾಗಿದೆ. ಎಲ್ಲ ಪ್ರಜೆಗಳು ಸಮಾನತೆ, ಮಾನವೀಯ ಘನತೆ ಮತ್ತು ನ್ಯಾಯದ ನೈತಿಕ ತಳಹದಿಗೆ ಬದ್ಧರಾಗಿರಬೇಕು. ಇತ್ತೀಚಿನ ವಿಚಾರಣೆ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯಗಳಿಂದ ನಮಗೆ ತೀವ್ರ ಆಘಾತವಾಗಿದೆ ಎಂದು ಗಣ್ಯರು ವಿವರಿಸಿದ್ದಾರೆ.
ಅದರಲ್ಲೂ ಮುಖ್ಯವಾಗಿ, ರೋಹಿಂಗ್ಯಾ ಸಮುದಾಯದವರಿಗೆ ನಿರಾಶ್ರಿತರು ಎಂಬ ಸ್ಥಾನಮಾನ ನೀಡಿರುವುದನ್ನೇ ಪ್ರಶ್ನಿಸಲಾಗಿದ್ದು, ಅವರನ್ನು ಭಾರತಕ್ಕೆ ಅಕ್ರಮವಾಗಿ ನುಸುಳಿದವರಿಗೆ ಸಮಾನವಾಗಿ ಬಿಂಬಿಸಲಾಗಿದೆ. ಅಕ್ರಮವಾಗಿ ಪ್ರವೇಶಿಸಲು ಸುರಂಗ ಕೊರೆದಿದ್ದಾರೆ ಎಂಬ ಉಲ್ಲೇಖವನ್ನೂ ಮಾಡಲಾಗಿದೆ. ಹೀಗೆ ಪ್ರವೇಶಿಸಿದವರಿಗೆ, ದೇಶದ ಆಂತರಿಕ ಬಡತನದ ಕಾರಣದಿಂದ ಆಹಾರ, ಆಸರೆ ಮತ್ತು ಶಿಕ್ಷಣ ನೀಡಿರುವುದನ್ನು ಪ್ರಶ್ನಿಲಾಗಿದ್ದು, ಇದು ನಿರಾಶ್ರಿತರಿಗೆ ಸಂವಿಧಾನ ಖಾತರಿಪಡಿಸಿದ ಸೌಲಭ್ಯಗಳ ನಿರಾಕರಣೆಯಾಗಿದೆ; ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ಭಾರತದಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ.ಪಿ.ಶಾ, ಕೆ.ಚಂದ್ರು, ಅಂಜನಾ ಪ್ರಕಾಶ್, ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮಾಜಿ ನಿರ್ದೇಸಕ ಪ್ರೊ.ಮೋಹನ್ ಗೋಪಾಲ್, ಸುಪ್ರೀಂಕೋಟ ಹಿರಿಯ ವಕೀಲ ಡಾ.ರಾಜೀವ್ ಧವನ್, ಚಂದ್ರ ಉದಯ ಸಿಂಗ್, ಕೋಲಿನ ಗೋನ್ಸಾಲ್ವೆನ್ಸ್, ಕಾಮಿನಿ ಜೈಸ್ವಾಲ್, ಮಿಹಿರ್ ದೇಸಾಯಿ, ಗೋಪಾಲ್ ಶಂಕರ ನಾರಾಯಣ, ಗೌತಮ್ ಭಾಟಿಯಾ, ಶಾರೂಕ್ ಅಲಂ, ಪ್ರಶಾಂತ್ ಭೂಷಣ್ ಮತ್ತಿತರರು ಸಹಿ ಮಾಡಿದ್ದಾರೆ.