ಮೋದಿ, ಆರೆಸ್ಸೆಸ್ ವಿರುದ್ಧದ ವ್ಯಂಗ್ಯಚಿತ್ರಕ್ಕಾಗಿ ಕಾರ್ಟೂನಿಸ್ಟ್ ವಿರುದ್ಧ ಪ್ರಕರಣ ದಾಖಲು
ಹೇಮಂತ್ ಮಾಳವೀಯ | PC : hemant.9826011028/Facebook
ಇಂದೋರ್ (ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ವ್ಯಂಗ್ಯಚಿತ್ರಗಳ ಆರೋಪದಲ್ಲಿ ಇಂದೋರಿನ ಕಾರ್ಟೂನಿಸ್ಟ್ ಹೇಮಂತ್ ಮಾಳವೀಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ತನ್ನ ವ್ಯಂಗ್ಯಚಿತ್ರಗಳು ಆಡಳಿತವನ್ನು ಪ್ರಶ್ನಿಸುವುದರಿಂದ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಾಳವೀಯ ಹೇಳಿದರು.
ಮಾಳವೀಯ ತನ್ನ ಫೇಸ್‌ಬುಕ್ ಖಾತೆಯಲ್ಲಿ ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಮತ್ತು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ್ದಾರೆ ಎಂದು ಮಧ್ಯಪ್ರದೇಶ ಹೈಕೋರ್ಟ್ ವಕೀಲ ಹಾಗೂ ಆರೆಸ್ಸೆಸ್ ಸ್ವಯಂಸೇವಕ ವಿನಯ್ ಜೋಶಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ರಾಜಕೀಯ ವಿಷಯಗಳ ಕುರಿತು ವ್ಯಂಗ್ಯಚಿತ್ರಗಳನ್ನು ರಚಿಸುವ ಮಾಳವೀಯ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದು ಇದು ಮೊದಲ ಬಾರಿಯಲ್ಲ. 2022ರಲ್ಲಿ ಬಾಬಾ ರಾಮದೇವ ಅವರ ಅಶ್ಲೀಲ ಪೋಸ್ಟರ್‌ಗಳನ್ನು ರಚಿಸಿದ್ದ ಆರೋಪದಲ್ಲಿ ಅವರ ವಿರುದ್ಧ ಉತ್ತರಾಖಂಡ ಪೋಲಿಸರು ಪ್ರಕರಣ ದಾಖಲಿಸಿದ್ದರು. ಬಳಿಕ ಡಿಸೆಂಬರ್ 2022ರಲ್ಲಿ ಪ್ರಧಾನಿ ಮೋದಿಯವರ ತಾಯಿಯ ನಿಧನದ ಬಳಿಕ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದ ಆರೋಪದಲ್ಲಿ ಇಂದೋರ ಪೋಲಿಸರು ಪ್ರಕರಣ ದಾಖಲಿಸಿದ್ದರು.
‘ಈ ಎರಡೂ ಪ್ರಕರಣಗಳಲ್ಲಿ ಮುಕ್ತಾಯ ವರದಿಗಳನ್ನು ಸಲ್ಲಿಸಲಾಗಿದೆ. ಆಡಳಿತವನ್ನು ಪ್ರಶ್ನಿಸುವ ನನ್ನ ವ್ಯಂಗ್ಯಚಿತ್ರಗಳಿಗಾಗಿ ನನ್ನನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ನಾನೆಂದಿಗೂ ಮೋದಿಯವರ ತಾಯಿಯ ವಿರುದ್ಧ ಮಾತನಾಡಿಲ್ಲ. ರಾಮದೇವ್ ಪ್ರಕರಣದಿಂದಾಗಿ ನಾನು ಕುಖ್ಯಾತಿ ಪಡೆದಾಗಿನಿಂದ ನಾನು ರಾಜ್ಯದಲ್ಲಿಯ ಬಲಪಂಥೀಯರ ಗುರಿಯಾಗಿದ್ದೇನೆ’ ಎಂದು ಮಾಳವೀಯ ತಿಳಿಸಿದರು.
ಮೋದಿ ಮತ್ತು ಆರೆಸ್ಸೆಸ್ ಸ್ವಯಂಸೇವಕರ ವಿರುದ್ಧ ಅವಹೇಳನಕಾಗಿ ವ್ಯಂಗ್ಯಚಿತ್ರಗಳ ಪೋಸ್ಟ್‌ಗಳ ಜೊತೆ ಮಾಳವೀಯ ಶಿವನ ಬಗ್ಗೆಯೂ ಟೀಕೆಗಳನ್ನು ಮಾಡಿದ್ದು,ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ಸಮುದಾಯಗಳ ನಡುವೆ ಸಂಘರ್ಷ,ಗಲಭೆ ಹಾಗೂ ಹಿಂಸಾಚಾರಕ್ಕೆ ಆರೆಸ್ಸೆಸ್ ಮತ್ತು ಸಮಾಜವನ್ನು ಪ್ರಚೋದಿಸುವುದು ಅವರ ಉದ್ದೇಶವಾಗಿದೆ ಎಂದು ಜೋಶಿ ದೂರಿನಲ್ಲಿ ಆರೋಪಿಸಿದ್ದಾರೆ.