×
Ad

ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ ಭಾರತದ ಕ್ರಮ್‌ ಸಮರ್ಥನೀಯ: ವಿದೇಶಾಂಗ ಸಚಿವಾಲಯ

Update: 2025-05-24 20:42 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ಸಿಂಧೂ ನದಿ ನೀರು ಒಪ್ಪಂದದ ಮಾರ್ಗಸೂಚಿಯಾದ ಸ್ನೇಹ ಮತ್ತು ಸದ್ಭಾವನೆ ಸೇರಿದಂತೆ ತತ್ವಗಳನ್ನು ಪಾಕಿಸ್ತಾನವು ಕೈಬಿಟ್ಟಿರುವುದರಿಂದ ಒಪ್ಪಂದವನ್ನು ಸ್ಥಗಿತಗೊಳಿಸಿರುವ ಭಾರತದ ನಿರ್ಧಾರವು ಸಹಜವೇ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ಸಂಸದೀಯ ಸಮಿತಿಗೆ ತಿಳಿಸಿದೆ.

ಇಂಜಿನಿಯರಿಂಗ್ ತಂತ್ರಗಳು, ಹವಾಮಾನ ಬದಲಾವಣೆ ಮತ್ತು ನೀರ್ಗಲ್ಲುಗಳ ಕರಗುವಿಕೆ ಸೇರಿದಂತೆ ವಾಸ್ತವ ಪರಿಸ್ಥಿತಿಯಲ್ಲಿಯ ಬದಲಾವಣೆಗಳು ಒಪ್ಪಂದದ ನಿಬಂಧನೆಗಳ ಕುರಿತು ಮರು ಮಾತುಕತೆಯನ್ನು ಅನಿವಾರ್ಯವಾಗಿಸಿವೆ ಎಂದು ಎಂಇಎ ತಿಳಿಸಿದೆ. ಅಲ್ಲದೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರು ಸಮಿತಿಯ ಮುಂದೆ ತನ್ನ ಹೇಳಿಕೆಯಲ್ಲಿ 1960ರ ಸಿಂದೂ ಜಲ ಒಪ್ಪಂದದ ಪೀಠಿಕೆಯಲ್ಲಿ ‘ಸದ್ಭಾವನೆ ಮತ್ತು ಸ್ನೇಹದ ಮನೋಭಾವದಲ್ಲಿ ಈ ಒಪ್ಪಂದವು ಅಂತಿಮಗೊಂಡಿದೆ’ ಎಂದು ಹೇಳಲಾಗಿದೆ. ವಾಸ್ತವದಲ್ಲಿ ಪಾಕಿಸ್ತಾನವು ಈ ಎಲ್ಲ ತತ್ವಗಳನ್ನು ಕೈಬಿಟ್ಟಿದೆ ಎಂದು ಬೆಟ್ಟು ಮಾಡಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ವಾಸ್ತವ ಪರಿಸ್ಥಿತಿಯಲ್ಲಿನ ಬದಲಾವಣೆಗಳಿಂದಾಗಿ ಉಭಯ ಸರಕಾರಗಳ ನಡುವೆ ಮಾತುಕತೆಗೆ ಭಾರತದ ವಿನಂತಿಗಳನ್ನು ಪಾಕಿಸ್ತಾನವು ತಿರಸ್ಕರಿಸುತ್ತಲೇ ಬಂದಿದೆ ಎಂದು ತಿಳಿಸಿರುವ ಎಂಇಎ, ಒಪ್ಪಂದವು 1950ರ ದಶಕ ಮತ್ತು 1960ರ ದಶಕದ ಆರಂಭದಲ್ಲಿಯ ಇಂಜಿನಿಯರಿಂಗ್ ತಂತ್ರಗಳನ್ನು ಆಧರಿಸಿರುವುದರಿಂದ ಅದನ್ನು 21ನೇ ಶತಮಾನಕ್ಕೆ ಸೂಕ್ತವಾಗುವಂತೆ ಮಾಡಲು ಮರುಮಾತುಕತೆ ನಡೆಸುವುದು ಅನಿವಾರ್ಯವಾಗಿದೆ ಎಂದು ಒತ್ತಿ ಹೇಳಿದೆ.

ಇತರ ಮೂಲಭೂತ ಬದಲಾವಣೆಗಳಲ್ಲಿ ನೀರ್ಗಲ್ಲುಗಳ ಕರಗುವಿಕೆ, ಹವಾಮಾನ ಬದಲಾವಣೆ, ನದಿಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣದಲ್ಲಿ ವ್ಯತ್ಯಾಸ ಮತ್ತು ಜನಸಂಖ್ಯಾ ಶಾಸ್ತ್ರ ಸೇರಿವೆ. ಇದರೊಂದಿಗೆ ಶುದ್ಧ ಇಂಧನದ ಅನ್ವೇಷಣೆ ಒಪ್ಪಂದದಡಿ ಹಕ್ಕುಗಳು ಮತ್ತು ಬಾಧ್ಯತೆಗಳ ಹಂಚಿಕೆಗಾಗಿ ಮರು ಮಾತುಕತೆ ನಡೆಸುವುದು ಕಡ್ಡಾಯವಾಗಿದೆ ಎಂದು ತಿಳಿಸಿರುವ ಎಂಇಎ, ಪಾಕಿಸ್ತಾನದಿಂದ ನಿರಂತರ ಗಡಿಯಾಚೆಯ ಭಯೋತ್ಪಾದನೆಯು ಒಪ್ಪಂದವನ್ನು ಅದರ ನಿಬಂಧನೆಗಳ ಪ್ರಕಾರ ಬಳಸಿಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ ಅಡ್ಡಿಯನ್ನುಂಟು ಮಾಡಿದೆ. ಮೂಲಭೂತ ಪರಿಸ್ಥಿತಿಗಳು ಸಂಪೂರ್ಣವಾಗಿ ಬದಲಾದಾಗ ಒಪ್ಪಂದವನ್ನು ಅಮಾನತುಗೊಳಿಸುವುದು ಸ್ವಾಭಾವಿಕ ಮತ್ತು ಭಾರತವು ಆ ಹಕ್ಕನ್ನು ಹೊಂದಿದೆ ಎಂದೂ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News