×
Ad

ಅದು ಲವ್ ಜಿಹಾದ್ ಪ್ರಕರಣವೇ ಆಗಿರಲಿಲ್ಲ: ಉತ್ತರ ಕಾಶಿ ಅಪಹರಣ ಪ್ರಕರಣದ ಕುರಿತು ಸ್ಫೋಟಕ ಹೇಳಿಕೆ ನೀಡಿದ ದೂರುದಾರ

ಪುರೋಲ: ಸಾಮಾನ್ಯ ಅಪರಾಧ ಪ್ರಕರಣವೊಂದಕ್ಕೆ ಲವ್ ಜಿಹಾದ್ ಪ್ರಕರಣದ ಆಯಾಮ ನೀಡಿದ್ದರಿಂದಾಗಿಯೇ ಉತ್ತರ ಕಾಶಿಯಲ್ಲಿ ಕಳೆದ ಎರಡು ವಾರದಿಂದ ಕೋಮು ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

Update: 2023-06-18 14:36 IST

ಪುರೋಲ: ಸಾಮಾನ್ಯ ಅಪರಾಧ ಪ್ರಕರಣವೊಂದಕ್ಕೆ ಲವ್ ಜಿಹಾದ್ ಪ್ರಕರಣದ ಆಯಾಮ ನೀಡಿದ್ದರಿಂದಾಗಿಯೇ ಉತ್ತರ ಕಾಶಿಯಲ್ಲಿ ಕಳೆದ ಎರಡು ವಾರದಿಂದ ಕೋಮು ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಅಪಹರಣ ಪ್ರಕರಣದ ಕುರಿತು ದೂರುದಾರರಾಗಿದ್ದ 40 ವರ್ಷದ ಶಾಲಾ ಶಿಕ್ಷಕರೊಬ್ಬರು ಇದರಿಂದ ಮನನೊಂದು ಕಳೆದ ಎರಡು ವಾರಗಳಿಂದ ಮನೆಯಿಂದ ಹೊರಗೇ ಬಂದಿಲ್ಲ. ತಮ್ಮ ಬೆಂಬಲ ಕೋರಿ ಬಂದ ಜನರನ್ನು ಭೇಟಿ ಮಾಡಲೂ ನಿರಾಕರಿಸಿದ್ದಾರೆ ಹಾಗೂ ಹೊಸ ಮೊಬೈಲ್ ಸಂಖ್ಯೆ ಖರೀದಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಅಪಹರಣ ಪ್ರಕರಣಕ್ಕೆ ಯಾವುದೇ ಕೋಮು ಆಯಾಮ ಇಲ್ಲದೆ ಹೋದರೂ ಕೆಲವು ಬಲಪಂಥೀಯ ಹಿಂದೂ ಸಂಘಟನೆಗಳು ಉದ್ದೇಶಪೂರ್ವಕವಾಗಿಯೇ ಈ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿದ್ದಾರೆ ಎಂಬುದು ದೂರುದಾರರಾದ ಶಾಲಾ ಶಿಕ್ಷಕರ ಅಳಲು. ಈ ಕುರಿತು Hindustan Times ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು, " ಅದು ಲವ್ ಜಿಹಾದ್ ಪ್ರಕರಣ ಆಗಿರಲೇ ಇಲ್ಲ. ಅದೊಂದು ದೈನಂದಿನ ಅಪರಾಧ ಪ್ರಕರಣವಾಗಿದ್ದು, ಆ ಕೃತ್ಯವನ್ನು ಎಸಗಿದವರೀಗ ಜೈಲು ಸರಳುಗಳ ಹಿಂದೆ ಬಂಧಿಯಾಗಿದ್ದಾರೆ. ಈ ಕುರಿತು ನ್ಯಾಯಾಂಗ ತೀರ್ಮಾನ ಕೈಗೊಳ್ಳಲಿದೆ. ಆದರೆ, ಘಟನೆಯ ಬೆನ್ನಿಗೇ ಈ ಪ್ರಕರಣಕ್ಕೆ ಕೋಮು ಬಣ್ಣ ನೀಡುವ ಪ್ರಯತ್ನಗಳು ನಡೆದವು. ನಮ್ಮ ಪರವಾಗಿ ಬಲಪಂಥೀಯ ಗುಂಪಿನವರು ತಾವೇ ಸ್ವತಃ ಪೊಲೀಸ್ ದೂರನ್ನು ಸಿದ್ಧಪಡಿಸಿದ್ದು, ಆ ದೂರನ್ನು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಮೇ 26ರಂದು ನಡೆದಿದ್ದ ಅಪಹರಣ ಪ್ರಕರಣದ ಸಂತ್ರಸ್ತ ಯುವತಿಯ ಗುರುತನ್ನು ಬಹಿರಂಗಪಡಿಸದಿರಲು ಆಕೆಯ ಭಾವನಾದ ಶಾಲಾ ಶಿಕ್ಷಕರ ಗುರುತನ್ನು ಮುಚ್ಚಿಡಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣವನ್ನು ಲವ್ ಜಿಹಾದ್ ಪ್ರಯತ್ನ ಎಂದು ಬಲಪಂಥೀಯ ಹಿಂದೂ ಸಂಘಟನೆಗಳು ಆರೋಪಿಸಿದ್ದವು.

ನಂತರ, ಇಂತಹ ಗುಂಪುಗಳು ನಡೆಸಿದ ಪ್ರತಿಭಟನೆಯಿಂದ ಉತ್ತರ ಕಾಶಿ ಪ್ರಕ್ಷುಬ್ಧಗೊಂಡು, ಈ ಗುಂಪುಗಳ ಬೆದರಿಕೆಯ ಕಾರಣಕ್ಕೆ 40-45 ಮುಸ್ಲಿಂ ವರ್ತಕರು ಹಾಗೂ ಸ್ಥಳೀಯ ನಿವಾಸಿಗಳು ಪಟ್ಟಣ ತೊರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News