ಈಡಿ, ಸಿಬಿಐ ದಾಳಿ ಭೀತಿಯಿಂದ ಬಾಲಿವುಡ್ ತಾರೆಯರು ಸರಕಾರವನ್ನು ಟೀಕಿಸುವುದಿಲ್ಲ: ಜಾವೇದ್ ಅಖ್ತರ್
ಜಾವೇದ್ ಅಖ್ತರ್ (Photo: PTI)
ಮುಂಬೈ: ತಮ್ಮ ಮೇಲೆ ಈಡಿ, ಸಿಬಿಐ ಅಥವಾ ಆದಾಯ ತೆರಿಗೆ ದಾಳಿಯಾಗಬಹುದು ಎಂಬ ಭೀತಿಯಿಂದ ಬಾಲಿವುಡ್ ತಾರೆಯರು ಆಡಳಿತಾರೂಢ ಸರಕಾರವನ್ನು ಟೀಕಿಸುವುದಿಲ್ಲ ಎಂದು ಬಾಲಿವುಡ್ ನ ಖ್ಯಾತ ಗೀತೆ ರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ.
ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿರುವ ಜಾವೇದ್ ಅಖ್ತರ್, “ಅಮೆರಿಕದಲ್ಲಿನ ಪರಿಸ್ಥಿತಿಗೂ, ನಮ್ಮಲ್ಲಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ಅಮೆರಿಕದ ಖ್ಯಾತ ತಾರೆ ಮೆರಿಲ್ ಸ್ಟ್ರೀಪ್ ಅಮೆರಿಕ ಸರಕಾರದ ವಿರುದ್ಧ ಒಂದು ಹೇಳಿಕೆ ನೀಡಿದರು. ಆದರೆ, ಅಲ್ಲಿ ಆಕೆಯ ಮೇಲೆ ಯಾವುದೇ ಆದಾಯ ತೆರಿಗೆ ದಾಳಿ ನಡೆಯಲಿಲ್ಲ. ಆದರೆ, ಬಾಲಿವುಡ್ ತಾರೆಯರಲ್ಲಿನ ಈ ಅಭದ್ರತೆ ನಿಜವೊ, ಸುಳ್ಳೊ ಗೊತ್ತಿಲ್ಲ. ಈ ಕುರಿತು ಚರ್ಚೆ ನಡೆಸುವುದು ನನಗೆ ಬೇಕಿಲ್ಲ. ಆದರೆ, ಅಂತಹ ಭಾವನೆ ಅಸ್ತಿತ್ವದಲ್ಲಿದೆ. ಯಾರ ಮನಸ್ಸಿನಲ್ಲಾದರೂ ಈ ಭೀತಿಯಿದ್ದರೆ, ಅಂಥವರು ಈಡಿ, ಸಿಬಿಐ ಹಾಗೂ ಆದಾಯ ತೆರಿಗೆ ದಾಳಿಯ ಬಗ್ಗೆ ಆತಂಕ ಪಡುತ್ತಾರೆ. ನಮ್ಮದೇನಾದರೂ ಕಡತ ತೆರೆದು, ನಮ್ಮ ಕುರಿತು ತನಿಖೆ ನಡೆಸಬಹುದು ಎಂಬ ಭೀತಿಯಿಂದ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಬಾಲಿವುಡ್ ತಾರೆಯರಿಗೆ ತಾರೆಯರೆಂಬ ಸ್ಥಾನವಿದ್ದರೂ, ಅವರೂ ಕೂಡಾ ಒಂದೇ ನಿಯಮಗಳು ಹಾಗೂ ಕಾನೂನುಗಳಡಿ ಕಾರ್ಯನಿರ್ವಹಿಸುವ ಸಮಾಜದ ಸದಸ್ಯರಾಗಿದ್ದಾರೆ. ಅವರು ಚಿತ್ರೋದ್ಯಮದಲ್ಲಿರಬಹುದು, ಆದರೆ, ಅವರು ಇದೇ ಸಮಾಜದಲ್ಲಿ ಜೀವಿಸುತ್ತಿದ್ದಾರೆ. ಅವರೂ ಕೂಡಾ ಸಾಮಾನ್ಯ ಮನುಷ್ಯರಂತೆಯೇ ವ್ಯವಹರಿಸುತ್ತಾರೆ. ಚಲನಚಿತ್ರ ವೃತ್ತಿಯಲ್ಲಿ ಕೊಂಚ ಮಟ್ಟಿನ ಅದ್ದೂರಿತನ ಮಾತ್ರವಿದೆ. ಸರಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ಕೆಲವೇ ವ್ಯಕ್ತಿಗಳ ಪೈಕಿ ನಾನೂ ಒಬ್ಬನಾಗಿದ್ದೇನೆ. ಆದರೆ, ಬೇರೆಯವರಿಗೇಕೆ ಧ್ವನಿ ಎತ್ತಲಾಗುತ್ತಿಲ್ಲ ಎಂಬುದು ನನಗೆ ಅರ್ಥವಾಗಿದೆ” ಎಂದು ಅವರು ಹೇಳಿದ್ದಾರೆ.