Uttar Pradesh | ಶಾಲೆಗಳಿಗೆ ಕ್ರಿಸ್ಮಸ್ ರಜೆಯಿಲ್ಲ,ವಿದ್ಯಾರ್ಥಿಗಳು ವಾಜಪೇಯಿ ಜನ್ಮ ಶತಾಬ್ದಿ ಆಚರಿಸಲಿದ್ದಾರೆ: ವರದಿ
ಅಟಲ್ ಬಿಹಾರಿ ವಾಜಪೇಯಿ | Photo Credit : PTI
ಹೊಸದಿಲ್ಲಿ,ಡಿ.24: ಗುರುವಾರ ಕ್ರಿಸ್ಮಸ್ ಪ್ರಯುಕ್ತ ರಾಜ್ಯದಲ್ಲಿಯ ಶಾಲೆಗಳಿಗೆ ರಜೆಯಿಲ್ಲ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಆಚರಣೆಗಾಗಿ ತೆರೆದಿರುತ್ತವೆ ಎಂದು ಉತ್ತರ ಪ್ರದೇಶದ ಬಿಜೆಪಿ ಸರಕಾರವು ಪ್ರಕಟಿಸಿದೆ ಎಂದು ಸುದ್ದಿಸಂಸ್ಥೆಯು ಬುಧವಾರ ವರದಿ ಮಾಡಿದೆ.
ಗುರುವಾರ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿರುವ ಪ್ರಾಥಮಿಕ ಶಿಕ್ಷಣ ಇಲಾಖೆಯು, ವಾಜಪೇಯಿಯವರನ್ನು ಗೌರವಿಸಲು ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಮರಣಾರ್ಥ ಚಟುವಟಿಕೆಗಳನ್ನು ಆಯೋಜಿಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಿದೆ. ಆದೇಶವು ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅನ್ವಯಿಸುತ್ತದೆ.
ಡಿ.25ನ್ನು ಕ್ರಿಸ್ಮಸ್ ಬದಲಿಗೆ ‘ಬಾಲ ಗೌರವ ಮತ್ತು ಉತ್ತಮ ಆಡಳಿತ ದಿನ’ಎಂದು ಆಚರಿಸುವಂತೆ ಸಹಾರನ್ ಪುರ ಜಿಲ್ಲೆಯ ಬಜರಂಗ ದಳ ಘಟಕದ ಆಗ್ರಹಗಳ ನಡುವೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿಯಲ್ಲಿ ತಿಳಿಸಿದೆ.
2014ರಲ್ಲಿ ಹೊಸದಾಗಿ ಚುನಾಯಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಆರಂಭಿಸಿದ ಉತ್ತಮ ಆಡಳಿತ ದಿನವನ್ನು ವಾಜಪೇಯಿಯವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ಡಿ.25ರಂದು ಆಚರಿಸಲಾಗುತ್ತದೆ.
ಶಾಲೆಗಳಿಗೆ ಕ್ರಿಸ್ಮಸ್ ರಜೆಯನ್ನು ನೀಡದಿರುವ ಸರಕಾರದ ನಿರ್ಧಾರವು ಟೀಕೆಗೆ ಗುರಿಯಾಗಿದೆ. ರಜೆಯನ್ನು ರದ್ದುಗೊಳಿಸಿರುವುದು ಕ್ರೈಸ್ತ ಸಮುದಾಯದ ಕಡೆಗಣನೆಯಾಗಿದೆ ಮತ್ತು ಸಾರ್ವಜನಿಕ ಶಿಕ್ಷಣದ ಜಾತ್ಯತೀತ ಸ್ವರೂಪವನ್ನು ದುರ್ಬಲಗೊಳಿಸುತ್ತದೆ ಎಂದು ಕ್ರೈಸ್ತ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಂಪ್ರದಾಯಿಕ ರಜೆಯ ಬದಲಿಗೆ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಿರ್ದೇಶನವು ಕ್ರಿಶ್ಚಿಯನ್ ಕ್ಯಾಲೆಂಡರ್ನಲ್ಲಿಯ ಅತ್ಯಂತ ಪವಿತ್ರ ದಿನವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಅಖಿಲ ಭಾರತ ಕ್ರಿಶ್ಚಿಯನ್ ಮಂಡಳಿಯ ಮಹಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಏಕೀಕರಣ ಮಂಡಳಿಯ ಸದಸ್ಯ ಜಾನ್ ದಯಾಳ್ ಹೇಳಿದರು.