ಉನ್ನಾವೊ ಅತ್ಯಾಚಾರ ಪ್ರಕರಣ | “ಘರ್ ತೋ ಉನ್ ಕಾ ಉನ್ನಾವೊ ಹೈ”: ಸಂತ್ರಸ್ತೆಯನ್ನು ಅಣಕಿಸಿದ Uttar Pradesh ಸಚಿವ
ಓಂ ಪ್ರಕಾಶ ರಾಜಭರ್ | Photo Credit ; PTI
ಲಕ್ನೋ,ಡಿ.24: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಬುಧವಾರ ಅಣಕಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಓಂ ಪ್ರಕಾಶ್ ರಾಜಭರ್, ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಕ್ಕಾಗಿ ಅವರನ್ನು ಅಪಹಾಸ್ಯ ಮಾಡಿದರು.
ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ನ ಜೈಲು ಶಿಕ್ಷೆಯನ್ನು ಆತನ ಮೇಲ್ಮನವಿ ಇತ್ಯರ್ಥಗೊಳ್ಳುವವರೆಗೆ ಅಮಾನತಿನಲ್ಲಿರಿಸಿದ ಬಳಿಕ ಸಂತ್ರಸ್ತೆ ಮಹಿಳೆ ಮತ್ತು ಕುಟುಂಬ ಸದಸ್ಯರು ದಿಲ್ಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರಪಕ್ಷ ಸುಹೇಲದೇವ್ ಭಾರತೀಯ ಸಮಾಜ ಪಾರ್ಟಿಯ (ಎಸ್ಬಿಎಸ್ಪಿ) ಮುಖ್ಯಸ್ಥರಾಗಿರುವ ರಾಜಭರ್ ಮಂಗಳವಾರ ಬೆಳಿಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಹೇಳಿಕೆಯನ್ನು ನೀಡಿದರು.
ಪೋಲಿಸ್ ಸಿಬ್ಬಂದಿಗಳು ಸಂತ್ರಸ್ತೆಯನ್ನು ಎಳೆದೊಯ್ಯುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಆಕೆಯ ಬಗ್ಗೆ ದಿಲ್ಲಿ ಪೋಲಿಸರ ಅಸಡ್ಡೆಯ ಕುರಿತು ಸುದ್ದಿಗಾರರು ರಾಜಭರ್ ಅವರನ್ನು ಪ್ರಶ್ನಿಸಿದ್ದರು.
ಸಂತ್ರಸ್ತೆಯನ್ನು ಇಂಡಿಯಾ ಗೇಟ್ ಬಳಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ಓರ್ವ ಸುದ್ದಿಗಾರ ಹೇಳಿದಾಗ ಗಹಗಹಿಸಿ ನಕ್ಕ ರಾಜಭರ್, ‘ಇಂಡಿಯಾ ಗೇಟ್? ಉನ್ ಕಾ ಘರ್ ತೋ ಉನ್ನಾವೊ ಹೈ(ಉನ್ನಾವೊ ಅವರ ಮನೆಯಾಗಿದೆ)ʼ ಎಂದು ಹೇಳಿದರು.
‘ಸೆಂಗಾರ್ ಸಂತ್ರಸ್ತೆಯ ಕುಟುಂಬದಿಂದ ದೂರವಿರಬೇಕು, ಐದು ಕಿ.ಮೀ.ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯವು ನಿರ್ದೇಶನಗಳನ್ನು ಹೊರಡಿಸಿದೆ. ಭದ್ರತೆಯನ್ನು ಖಚಿತಪಡಿಸಿ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿರುವಾಗ ದಿಲ್ಲಿಯಲ್ಲೇಕೆ ಧರಣಿ? ಇಲ್ಲಿ ಭದ್ರತೆಯ ಕೊರತೆಯ ಪ್ರಶ್ನೆ ಎಲ್ಲಿದೆ?’ ಎಂದರು.
ಪ್ರತಿಕ್ರಿಯೆಯನ್ನು ಕೋರಿ ಸುದ್ದಿಸಂಸ್ಥೆಯ ಕರೆಗಳಿಗೆ ರಾಜಭರ್ ಉತ್ತರಿಸಲಿಲ್ಲವಾದರೂ ಅವರ ಪುತ್ರ ಹಾಗೂ ಎಸ್ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ರಾಜಭರ್,‘ಹಾಗಾದರೆ ಓಂ ಪ್ರಕಾಶ್ ರಾಜಭರ್ ಅವರು ಈ ಬಗ್ಗೆ ಅಳಬೇಕು, ಅಂದರೆ ಸರಿಯಾಗುತ್ತದೆ. ಪ್ರಕರಣದಲ್ಲಿ ತನಿಖೆಯನ್ನು ಈಗಾಗಲೇ ನಡೆಸಲಾಗಿದೆ. ಕುಟುಂಬಕ್ಕೆ ಭದ್ರತೆಯ ಕುರಿತು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ. ಹೇಳುವುದೇನೂ ಬಾಕಿಯಿಲ್ಲ’ ಎಂದರು.