×
Ad

ಜಾರ್ಖಂಡ್ ವಿಧಾನಸಭಾ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ

Update: 2024-11-03 18:07 IST

ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ರವಿವಾರ ಇಲ್ಲಿ ಬಿಡುಗಡೆಗೊಳಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮಹಿಳೆಗೂ ಮಾಸಿಕ 2,100 ರೂ.ಗಳನ್ನು ಒದಗಿಸುವ ಭರವಸೆಯನ್ನು ನೀಡಿದರು.

ನ.13 ಮತ್ತು ನ.20ರಂದು ಎರಡು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆ ನಡೆಯಲಿದ್ದು,ನ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ,ತಮಗೆ ಭ್ರಷ್ಟಾಚಾರದಿಂದ ತುಂಬಿದ ಸರಕಾರ ಬೇಕೇ ಅಥವಾ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸರಕಾರ ಬೇಕೇ;ಬಾಂಗ್ಲಾದೇಶಿಗಳ ನುಸುಳುವಿಕೆಗೆ ಅವಕಾಶ ನೀಡುವ ಮೂಲಕ ಜಾರ್ಖಂಡ್‌ನ ಅನನ್ಯತೆ,ಭೂಮಿ ಮತ್ತು ಮಹಿಳೆಯರಿಗೆ ಅಪಾಯವನ್ನುಂಟು ಮಾಡುವ ಸರಕಾರವು ಬೇಕೇ ಅಥವಾ ಗಡಿಗಳನ್ನು ರಕ್ಷಿಸುವ ಬಿಜೆಪಿ ಸರಕಾರವು ಬೇಕೇ ಎನ್ನುವುದನ್ನು ಜಾರ್ಖಂಡ್‌ನ ಜನರು ನಿರ್ಧರಿಸಬೇಕಿದೆ ಎಂದು ಹೇಳಿದರು.

‘‘ಮುಖ್ಯಮಂತ್ರಿ ಹೇಮಂತ ಸೊರೇನ್‌ರ ಜೆಎಂಎಂ ಸರಕಾರದಡಿ ಜಾರ್ಖಂಡ್‌ನ ಆದಿವಾಸಿಗಳು ಸುರಕ್ಷಿತರಾಗಿಲ್ಲ. ಸಂತಾಲ ಪರಗಣದಲ್ಲಿ ಆದಿವಾಸಿಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಬಾಂಗ್ಲಾದೇಶಿ ನುಸುಳುಕೋರರು ಇಲ್ಲಿಗೆ ಬರುತ್ತಾರೆ,ನಮ್ಮ ಹೆಣ್ಣುಮಕ್ಕಳಿಗೆ ಆಮಿಷವೊಡ್ಡಿ ಅವರನ್ನು ಮದುವೆಯಾಗುತ್ತಾರೆ ಮತ್ತು ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ. ಇದನ್ನು ನಿಲ್ಲಿಸದಿದ್ದರೆ ಜಾರ್ಖಂಡನ ಸಂಸ್ಕೃತಿ,ಉದ್ಯೋಗ,ಭೂಮಿ ಮತ್ತು ಹೆಣ್ಣುಮಕ್ಕಳು ಸುರಕ್ಷಿತರಾಗಿ ಉಳಿಯುವುದಿಲ್ಲ. ಇದಕ್ಕಾಗಿಯೇ ಬಿಜೆಪಿಯು ‘ರೋಟಿ,ಬೇಟಿ,ಮಾಟಿ’ ಘೋಷಣೆಯೊಂದಿಗೆ ಮುಂದೆ ಸಾಗುತ್ತಿದೆ ’’ ಎಂದು ಶಾ ನುಡಿದರು.

ಬಿಜೆಪಿ ಭರವಸೆಗಳು:

►ಪ್ರತಿ ಮಹಿಳೆಗೆ ಮಾಸಿಕ 2,100 ರೂ.

►ಪ್ರತಿ ಕುಟುಂಬಕ್ಕೆ 500 ರೂ.ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ, ವಾರ್ಷಿಕ ಎರಡು ಸಿಲಿಂಡರ್‌ಗಳು ಉಚಿತ

►ನುಸುಳುಕೋರರು ವಶಪಡಿಸಿಕೊಂಡಿರುವ ಭೂಮಿ ಆದಿವಾಸಿಗಳಿಗೆ ವಾಪಸ್

►ಆದಿವಾಸಿಗಳನ್ನು ಮದುವೆಯಾಗುವ ನುಸುಳುಕೋರರ ಮಕ್ಕಳಿಗೆ ಆದಿವಾಸಿಗಳೆಂದು ಮಾನ್ಯತೆ ನೀಡುವುದಿಲ್ಲ

►ಏಕರೂಪ ನಾಗರಿಕ ಸಂಹಿತೆಯಿಂದ ಆದಿವಾಸಿಗಳಿಗೆ ವಿನಾಯಿತಿ

►ಬಾಂಗ್ಲಾದೇಶಿಗಳ ನುಸುಳುವಿಕೆ ವಿರುದ್ಧ ಕಠಿಣ ಕ್ರಮ

►ಸಾರ್ವಜನಿಕ ಕ್ಷೇತ್ರದಲ್ಲಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಗೆ ತಡೆ

►ಯುವಜನರಿಗಾಗಿ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಐದು ಲ.ಉದ್ಯೋಗಾವಕಾಶಗಳ ಸೃಷ್ಟಿ

►2,87,500 ಸರಕಾರಿ ಹುದ್ದೆಗಳಿಗೆ ಪಾರದರ್ಶಕ ನೇಮಕಾತಿ

►2025,ನವಂಬರ್‌ನೊಳಗೆ ಕನಿಷ್ಠ 1,50,000 ಹುದ್ದೆಗಳು ಭರ್ತಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News