ಹೊಸ ಸಿಜೆಐ ನೇಮಕಾತಿ ಪ್ರಕ್ರಿಯೆ ಆರಂಭ : ನ್ಯಾ.ಸೂರ್ಯಕಾಂತ್ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ?
ನ್ಯಾ. ಸೂರ್ಯಕಾಂತ್ | Photo Credit : courtbook.in
ಹೊಸದಿಲ್ಲಿ,ಅ. 24: ಭಾರತದ ಮುಖ್ಯ ನ್ಯಾಯಾಧೀಶ ಭೂಷಣ್ ಆರ್.ಗವಾಯಿ ಅವರ ಅಧಿಕಾರಾವಧಿ ಮುಕ್ತಾಯ ಹಂತಕ್ಕೆ ಬರುತ್ತಿರುವಂತೆಯೇ, ತನ್ನ ಉತ್ತರಾಧಿಕಾರಿಯೊಬ್ಬರ ಹೆಸರನ್ನು ಶಿಫಾರಸು ಮಾಡುವಂತೆ ಕೇಂದ್ರ ಕಾನೂನು ಸಚಿವಾಲಯವು ಅವರನ್ನು ಕೇಳಿದೆ. ಇದರೊಂದಿಗೆ, ಮುಂದಿನ ಮುಖ್ಯ ನ್ಯಾಯಾಧೀಶರ ಔಪಚಾರಿಕ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಮುಖ್ಯ ನ್ಯಾಯಮೂರ್ತಿ ಗವಾಯಿ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ನೂತನ ಮುಖ್ಯ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು, ತನ್ನ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯವು ಭಾರತೀಯ ನ್ಯಾಯಾಂಗದ ಹಾಲಿ ಮುಖ್ಯಸ್ಥರನ್ನು ಕೇಳುತ್ತದೆ. ಇದು ಹಾಲಿ ಮುಖ್ಯ ನ್ಯಾಯಾಧೀಶರ ನಿವೃತ್ತಿಗೆ ಒಂದು ತಿಂಗಳು ಇರುವಾಗ ನಡೆಯುತ್ತದೆ. ಆಗ ಮುಖ್ಯ ನ್ಯಾಯಾಧೀಶರು ಸುಪ್ರೀಮ್ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡುತ್ತಾರೆ.
ಮುಖ್ಯ ನ್ಯಾಯಮೂರ್ತಿ ಗವಾಯಿ ಬಳಿಕ, ಅವರ ಸ್ಥಾನವನ್ನು ನ್ಯಾ. ಸೂರ್ಯಕಾಂತ್ ತುಂಬಲಿದ್ದಾರೆ ಎನ್ನಲಾಗಿದೆ. ನ್ಯಾ. ಸೂರ್ಯಕಾಂತ್‌ರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಗವಾಯಿ ಶಿಫಾರಸು ಮಾಡಿದ ಬಳಿಕ ನೂತನ ಮುಖ್ಯ ನ್ಯಾಯಾಧೀರ ನೇಮಕಾತಿಯ ಪ್ರಕ್ರಿಯೆ ಆರಂಭಗೊಳ್ಳುತ್ತದೆ.
1962 ಫೆಬ್ರವರಿ 10ರಂದು ಹರ್ಯಾಣದ ಹಿಸಾರ್‌ನಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿರುವ ನ್ಯಾ. ಸೂರ್ಯಕಾಂತ್, 1981ರಲ್ಲಿ ಹಿಸಾರ್‌ನ ಸರಕಾರಿ ಸ್ನಾತಕೋತ್ತರ ಕಾಲೇಜ್‌ನಿಂದ ಪದವಿ ಪಡೆದರು. ಬಳಿಕ 1984ರಲ್ಲಿ, ರೋಹ್ತಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಿಂದ ಕಾನೂನಿನಲ್ಲಿ ಪದವಿ ಪಡೆದರು. 1984ರಲ್ಲಿ ಅವರು ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಮಾರನೇ ವರ್ಷ ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಅವರು ವಕೀಲಿ ವೃತ್ತಿ ಆರಂಭಿಸಿದರು.
2000ದಲ್ಲಿ ನ್ಯಾ. ಸೂರ್ಯಕಾಂತ್‌ರನ್ನು ಹರ್ಯಾಣದ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಯಿತು. 2004 ಜನವರಿ 9ರಂದು ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಿಸಲಾಯಿತು. 2018ರಲ್ಲಿ ಅವರು ಹಿಮಾಚಲಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದರು. 2019ರಲ್ಲಿ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲಾಯಿತು.
ನ್ಯಾ. ಸೂರ್ಯಕಾಂತ್ 2027 ಫೆಬ್ರವರಿ 9ರಂದು ನಿವೃತ್ತರಾಗಲಿದ್ದಾರೆ.