×
Ad

ನ್ಯಾ. ಯಶವಂತ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: 3 ನ್ಯಾಯಾಧೀಶರ ಸಮಿತಿಯಿಂದ ಮುಖ್ಯ ನ್ಯಾಯಾಧೀಶರಿಗೆ ತನಿಖಾ ವರದಿ ಹಸ್ತಾಂತರ

Update: 2025-05-05 22:15 IST

ನ್ಯಾ. ಯಶವಂತ್ ವರ್ಮಾ | PTI 

ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿರುವ ಮೂವರು ಸದಸ್ಯರ ಸಮಿತಿಯು ತನ್ನ ತನಿಖಾ ವರದಿಯನ್ನು ಭಾರತದ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾರಿಗೆ ರವಿವಾರ ಸಲ್ಲಿಸಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ನ್ಯಾಯಾಧೀಶ ಯಶವಂತ್ ವರ್ಮಾರ ದಿಲ್ಲಿಯಲ್ಲಿರುವ ನಿವಾಸದಲ್ಲಿ ಮಾರ್ಚ್ 14ರ ರಾತ್ರಿ ಬೆಂಕಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅಗಾಧ ಪ್ರಮಾಣದ ನಗದು ಪತ್ತೆಯಾಗಿತ್ತು ಎನ್ನಲಾಗಿದೆ.

‘‘ನ್ಯಾಯಾಧೀಶ ಯಶವಂತ್ ಶರ್ಮಾ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾಗಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಶೀಲ್ ನಾಗು, ಹಿಮಾಚಲಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಜಿ.ಎಸ್. ಸಂದವಾಲಿಯ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶೆ ಅನು ಶಿವರಾಮನ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ತನ್ನ ಮೇ 3ರ ವರದಿಯನ್ನು ಭಾರತದ ಮುಖ್ಯ ನ್ಯಾಯಾಧೀಶರಿಗೆ ಮೇ 4ರಂದು ಸಲ್ಲಿಸಿದೆ’’ ಎಂದು ಸುಪ್ರೀಂ ಕೋರ್ಟ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಆರೋಪ ಬೆಳಕಿಗೆ ಬಂದ ನಂತರ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವರ್ಮಾರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್ ಕೊಲೀಜಿಯಮ್ ಮಾರ್ಚ್ 20ರಂದು ಮುಂದಿಟ್ಟಿತ್ತು.

ಮಾರ್ಚ್ 22ರಂದು, ನ್ಯಾಯಾಧೀಶರ ವಿರುದ್ಧದ ಆರೋಪಗಳ ತನಿಖೆಗೆ ಭಾರತದ ಮುಖ್ಯ ನ್ಯಾಯಾಧೀಶ ಖನ್ನಾ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು.

ನ್ಯಾಯಾಧೀಶ ವರ್ಮರ ನಿವಾಸದಲ್ಲಿ ನಗದು ತುಂಬಿದ್ದ ಚೀಲಗಳು ಇದ್ದಿರುವುದನ್ನು ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಉಪಾಧ್ಯಾಯರ ವರದಿ ಖಚಿತಪಡಿಸಿತ್ತು. ಬೆಂಕಿ ಅಪಘಾತ ನಡೆದ ರಾತ್ರಿಯ ಮಾರನೇ ಬೆಳಗ್ಗೆ ನಗದನ್ನು ಅಲ್ಲಿಂದ ತೆಗೆಯಲಾಗಿತ್ತು ಎಂಬುದಾಗಿಯೂ ವರದಿ ಹೇಳಿತ್ತು.

ನ್ಯಾ. ವರ್ಮಾರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲೀಜಿಯಮ್ ಮಾರ್ಚ್ 24ರಂದು ಔಪಚಾರಿಕವಾಗಿ ಶಿಫಾರಸು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News