ಕೇರಳ| ಕ್ರಿಸ್ಮಸ್ ಕ್ಯಾರಲ್ ತೆರಳುತ್ತಿದ್ದ ಮಕ್ಕಳ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ: ವರದಿ
ಸಾಂದರ್ಭಿಕ ಚಿತ್ರ | Photo Credit : freepik
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್‌ನಲ್ಲಿ ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಪುಟ್ಟ ಮಕ್ಕಳ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಪುದುಶೇರಿಯಲ್ಲಿ ರವಿವಾರ ರಾತ್ರಿ ಈ ಘಟನೆ ಸಂಭವಿಸಿದೆ. ಸುಮಾರು 13 ವರ್ಷ ಪ್ರಾಯದ 25ಕ್ಕೂ ಹೆಚ್ಚು ಪುಟ್ಟ ಮಕ್ಕಳು ಸೇರಿ ಕ್ರಿಸ್ಮಸ್ ಕ್ಯಾರಲ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮನೆ ಮನೆಗೆ ತೆರಳಿ ಹಾಡು ಹಾಡುತ್ತಾ ಸಂಭ್ರಮಿಸುತ್ತಿದ್ದ ಮಕ್ಕಳ ತಂಡದ ಮೇಲೆ ಅಶ್ವಿನ್ ರಾಜ್ ಎಂಬ ಬಿಜೆಪಿ ಕಾರ್ಯಕರ್ತ ಹಾಗೂ ಆತನ ತಂಡ ಏಕಾಏಕಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ಮಕ್ಕಳು ಕ್ಯಾರಲ್ ಹಾಡಲು ಬಳಸುತ್ತಿದ್ದ ಬ್ಯಾಂಡ್ ಸೆಟ್ ಸ್ಥಳೀಯ ಸಿಪಿಐಎಂ ಕಚೇರಿಯದ್ದಾಗಿತ್ತು. ಆ ಬ್ಯಾಂಡ್ ಮೇಲೆ CPIM ಎಂದು ಬರೆಯಲಾಗಿತ್ತು. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರ ಗುಂಪು, ನಿಮಗೆ ಹಣ ನೀಡುತ್ತೇವೆ ಬನ್ನಿ ಎಂದು ಮಕ್ಕಳನ್ನು ಕರೆದುಕೊಂಡು ಹೋಗಿ, ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಮಕ್ಕಳು ಬಳಸುತ್ತಿದ್ದ ಬ್ಯಾಂಡ್ ಸೆಟ್ ಅನ್ನು ಕೂಡ ಪುಡಿಪುಡಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಸಬಾ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಮುಖ್ಯ ಆರೋಪಿ ಬಿಜೆಪಿ ಕಾರ್ಯಕರ್ತ ಅಶ್ವಿನ್ ರಾಜ್‌ನನ್ನು ಬಂಧಿಸಿದ್ದಾರೆ. ಅಶ್ವಿನ್ ಮೇಲೆ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ. ಈ ದಾಳಿಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹಲ್ಲೆಗೊಳಗಾದ ಬಾಲಕನೋರ್ವ ಮಾಧ್ಯಮದ ಜೊತೆ ಮಾತನಾಡುತ್ತಾ, "ನಾವು ಕೇವಲ ಸಂಭ್ರಮಕ್ಕಾಗಿ ಬ್ಯಾಂಡ್ ಬಳಸಿದ್ದೆವು. ಅದರಲ್ಲಿ ಸಿಪಿಎಂ ಎಂದು ಬರೆದಿರುವುದನ್ನು ನೋಡಿ ನಮ್ಮನ್ನು ಕರೆದುಕೊಂಡು ಹೋಗಿ ಹೊಡೆದರು" ಎಂದು ನೋವು ತೋಡಿಕೊಂಡಿದ್ದಾನೆ.
"ನಮ್ಮ ಕಚೇರಿಯಲ್ಲಿದ್ದ ಬ್ಯಾಂಡ್ ಸೆಟ್ ಅನ್ನು ಮಕ್ಕಳು ಕೇಳಿದಾಗ ಪ್ರೀತಿಯಿಂದ ಕೊಟ್ಟಿದ್ದೆವು. ರಾಜಕೀಯದ ಗಂಧಗಾಳಿಯೇ ಗೊತ್ತಿಲ್ಲದ ಈ ಪುಟ್ಟ ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಬಿಜೆಪಿ ಕಾರ್ಯಕರ್ತರ ಕ್ರಿಮಿನಲ್ ಮನಸ್ಥಿತಿಯನ್ನು ತೋರಿಸುತ್ತದೆ" ಎಂದು ಸ್ಥಳೀಯ ಸಿಪಿಐಎಂ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.