ಕೇರಳ ಗುಂಪು ಹತ್ಯೆ ಪ್ರಕರಣ | ಐವರು ಬಂಧಿತರಲ್ಲಿ ನಾಲ್ವರು ಸಂಘ ಪರಿವಾರ ಕಾರ್ಯಕರ್ತರು: ಸಚಿವ ಎಂ.ಬಿ. ರಾಜೇಶ್
ಕೇರಳ ಸಚಿವ ಎಂ.ಬಿ. ರಾಜೇಶ್ (Photo ceredit: ANI)
ಪಾಲಕ್ಕಾಡ್ (ಕೇರಳ): ಛತ್ತೀಸ್‌ಗಢ ಮೂಲದ ವಲಸೆ ಕಾರ್ಮಿಕರ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣವನ್ನು ಕೇರಳ ಸಚಿವ ಎಂ.ಬಿ. ರಾಜೇಶ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ನಾಲ್ವರು ಸಂಘ ಪರಿವಾರದ ಕಾರ್ಯಕರ್ತರು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್, “ಸಂಘ ಪರಿವಾರ ದೇಶಾದ್ಯಂತ ಹರಡುತ್ತಿರುವ ದ್ವೇಷ ರಾಜಕೀಯದ ಪರಿಣಾಮವೇ ಈ ಹಲ್ಲೆ. ಛತ್ತೀಸ್‌ಗಢದ ಕಾರ್ಮಿಕರನ್ನು ಬಾಂಗ್ಲಾದೇಶಿಗರು ಎಂದು ಆರೋಪಿಸಿ ಗುಂಪು ಹಲ್ಲೆ ನಡೆಸಲಾಗಿದೆ” ಎಂದು ಅವರು ಹೇಳಿದರು.
ಬಂಧಿತರಾದ ನಾಲ್ವರು ಸಂಘ ಪರಿವಾರ ಕಾರ್ಯಕರ್ತರು ಸಿಪಿಐ(ಎಂ) ನಾಯಕನ ಕೊಲೆ ಯತ್ನ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಈಗಾಗಲೇ ಆರೋಪಿಗಳಾಗಿದ್ದಾರೆ ಎಂದು ಸಚಿವ ತಿಳಿಸಿದರು.
ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜಿತ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, “ವಲಸೆ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಕುರಿತು ಕೊಲೆ ಯತ್ನದ ಪ್ರಕರಣ ದಾಖಲಾಗಿದೆ. ಐವರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದು, ತನಿಖೆಯ ಆಧಾರದ ಮೇಲೆ ಎಲ್ಲ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.