ಒಡಿಶಾ| ಸಾಂತಾ ಟೋಪಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ದುಷ್ಕರ್ಮಿಗಳಿಂದ ಕಿರುಕುಳ
ಸಾಂದರ್ಭಿಕ ಚಿತ್ರ | Photo Credit : freepik
ಭುವನೇಶ್ವರ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಂತಾ ಟೋಪಿಗಳನ್ನು ಮಾರಾಟ ಮಾಡುತ್ತಿರುವ ಬಡ ರಸ್ತೆ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡಿರುವ ದುಷ್ಕರ್ಮಿಗಳ ಗುಂಪೊಂದು, "ಇದು ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿ ಕ್ರಿಶ್ಚಿಯನ್ ಸಾಮಗ್ರಿಗಳನ್ನು ಮಾರಾಟ ಮಾಡಲು ಇನ್ನು ಮುಂದೆ ಅವಕಾಶವಿಲ್ಲ" ಎಂದು ಬೆದರಿಸಿರುವ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, "ನೀವು ಎಲ್ಲಿಯವರು ಹಾಗೂ ನೀವು ಹಿಂದೂಗಳೇ?" ಎಂದು ವ್ಯಾಪಾರಿಗಳನ್ನು ದುಷ್ಕರ್ಮಿಯೊಬ್ಬ ಪ್ರಶ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಆ ಪ್ರಶ್ನೆಗೆ, "ನಾವು ನಿಜವಾಗಿಯೂ ಹಿಂದೂಗಳಾಗಿದ್ದು, ಬಡವರಾಗಿರುವುದರಿಂದ ಸಾಂತಾ ಟೋಪಿಗಳನ್ನು ಮಾರಾಟ ಮಾಡುತ್ತಿದ್ದೇವೆ" ಎಂದು ವ್ಯಾಪಾರಿಗಳು ಉತ್ತರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, "ಇಲ್ಲಿ ಕೇವಲ ಜಗನ್ನಾಥ ದೇವರು ಮಾತ್ರ ಆಳಲು ಸಾಧ್ಯ. ಹಿಂದುಗಳಾಗಿ ನೀವೇಗೆ ಇದನ್ನು ಮಾಡುತ್ತಿದ್ಧೀರಿ? ಮೂಟೆ ಕಟ್ಟಿ ಇಲ್ಲಿಂದ ತಕ್ಷಣವೇ ತೆರಳಿ. ನಿಮಗೇನಾದರೂ ಮಾರಾಟ ಮಾಡಬೇಕಿದ್ದರೆ ಜಗನ್ನಾಥ ದೇವರ ಸಾಮಗ್ರಿಗಳನ್ನು ಮಾರಾಟ ಮಾಡಿ" ಎಂದು ಆತ ಪ್ರತಿಕ್ರಿಯೆ ನೀಡಿದ್ದಾನೆ.
ಆಗ ಒಂದಿಬ್ಬರು ವ್ಯಾಪಾರಿಗಳು ನಾವು ರಾಜಸ್ಥಾನದಿಂದ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಅದಕ್ಕೆ ಅವರು ನೀವು ಎಲ್ಲಿಯವರೆಗೆ ಕ್ರಿಶ್ಚಿಯನ್ ಕಲಾಕೃತಿಗಳನ್ನು ಮಾರಾಟ ಮಾಡುವುದಿಲ್ಲವೊ, ಅಲ್ಲಿಯವರೆಗೂ ನಿಮಗೆ ಯಾವುದೇ ತೊಂದರೆಯಿಲ್ಲ ಎಂದು ಭರವಸೆ ನೀಡಿದ್ದಾನೆ.
ಮತ್ತೊಂದೆಡೆ ಸಾಂತಾ ಟೋಪಿಗಳನ್ನು ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಿಯೊಬ್ಬನ ಬಳಿ ಬಂದಿರುವ ಗೂಂಡಾ ಒಬ್ಬ, "ಇದು ಹಿಂದೂ ರಾಷ್ಟ್ರ. ಇಲ್ಲಿ ಯಾರೂ ಕ್ರಿಸ್ಮಸ್ ಹಬ್ಬ ಆಚರಿಸಲು ನಾವು ಅವಕಾಶ ನೀಡುವುದಿಲ್ಲ. ಬಿಜೆಪಿ ಅಡಿಯ ಹೊಸ ಒಡಿಶಾಗೆ ಸುಸ್ವಾಗತ" ಎಂದು ನಿಂದಿಸಿ, ಆತನಿಗೆ ಬೆದರಿಕೆ ಒಡ್ಡಿದ್ದಾನೆ.