ಮೋದಿ ಸರಕಾರ MGNREGA, ಪ್ರಜಾಪ್ರಭುತ್ವದ ಮೇಲೆ ಬುಲ್ಡೋಝರ್ ಹರಿಸಿದೆ: ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ | Photo Credit :PTI
ಹೊಸದಿಲ್ಲಿ,ಡಿ. 22: ಬಿಜೆಪಿ ಸರಕಾರವು ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಅಜೀವಿಕ ಮಿಶನ್(ಗ್ರಾಮೀಣ) ಮಸೂದೆ, 2025 (ವಿಬಿ- ಜಿ ರಾಮ್ ಜಿ)ರ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡುತ್ತಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಮಸೂದೆಯನ್ನು ಅಭಿವೃದ್ಧಿಗಾಗಿ ತರಲಾಗುತ್ತಿಲ್ಲ, ಯೋಜನೆಯನ್ನು ನಾಶಪಡಿಸಲು ತರಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ಯೋಜನೆಯ ವೆಚ್ಚವನ್ನು ಭಾರತೀಯರು ತಮ್ಮ ಜೀವನೋಪಾಯ ನಾಶದ ಮೂಲಕ ಭರಿಸಲಿದ್ದಾರೆ ಎಂದು ಅವರು ಹೇಳಿದರು.
‘‘ಯಾವುದೇ ಸಾರ್ವಜನಿಕ ಚರ್ಚೆಯಿಲ್ಲ, ಸಂಸತ್‌ನಲ್ಲಿ ಚರ್ಚೆಯಿಲ್ಲ, ರಾಜ್ಯಗಳಿಂದ ಒಪ್ಪಿಗೆ ಪಡೆಯಲಾಗಿಲ್ಲ. ಈ ಮೂಲಕ ಮೋದಿ ಸರಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗ) ಮತ್ತು ಪ್ರಜಾಪ್ರಭುತ್ವ ಎರಡರ ಮೇಲೂ ಬುಲ್ಡೋಝರ್ ಹರಿಸಿದೆ. ಇದು ಅಭಿವೃದ್ಧಿಯಲ್ಲ, ನಾಶ. ಇದರ ವೆಚ್ಚವನ್ನು ಕೋಟ್ಯಂತರ ಪರಿಶ್ರಮಿ ಭಾರತೀಯರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಮೂಲಕ ಪಾವತಿಸಲಿದ್ದಾರೆ’’ ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಸಂಸತ್ ಡಿಸೆಂಬರ್ 18ರಂದು ವಿಬಿ- ಜಿ ರಾಮ್ ಜಿ ಮಸೂದೆಯನ್ನು ಅಂಗೀಕರಿಸಿದೆ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ರವಿವಾರ ಮಸೂದೆಗೆ ಅಂಕಿತ ಹಾಕಿದ್ದಾರೆ.