ತಾಂತ್ರಿಕ ದೋಷ: ಏರ್ ಇಂಡಿಯ ವಿಮಾನ ದಿಲ್ಲಿಯಲ್ಲಿ ತುರ್ತು ಭೂಸ್ಪರ್ಶ
ಏರ್ ಇಂಡಿಯ ವಿಮಾನ | Photo Credit : PTI
ಹೊಸದಿಲ್ಲಿ, ಡಿ. 22: ಸೋಮವಾರ ಬೆಳಗ್ಗೆ ದಿಲ್ಲಿಯಿಂದ ಮುಂಬೈಗೆ ಹಾರಾಟ ಆರಂಭಿಸಿದ ಏರ್ ಇಂಡಿಯಾ ವಿಮಾನವೊಂದರ ಒಂದು ಇಂಜಿನ್‌ನ ಕೀಲೆಣ್ಣೆ ಒತ್ತಡ (ಆಯಿಲ್ ಪ್ರೆಶರ್) ಶೂನ್ಯಕ್ಕೆ ಕುಸಿದ ಹಿನ್ನೆಲೆಯಲ್ಲಿ, ವಿಮಾನವು ಹಿಂದಿರುಗಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ನಡೆಸಿದೆ.
335 ಪ್ರಯಾಣಿಕರನ್ನು ಹೊತ್ತ ವಿಮಾನದ ಸಿಬ್ಬಂದಿ ಒಂದು ಇಂಜಿನ್‌ನ ಸಹಾಯದಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ, ದಿಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.
ಎಐಸಿ 887 ವಿಮಾನವು ಮುಂಜಾನೆ 3:20ರ ಬದಲಿಗೆ ಬೆಳಗ್ಗೆ 6:30ಕ್ಕೆ ಹಾರಾಟ ಆರಂಭಿಸಿತು. ಸುಮಾರು ಒಂದು ಗಂಟೆ ಪ್ರಯಾಣದ ಬಳಿಕ ವಿಮಾನವು ಮರಳಿ ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿತು. ವಿಮಾನವು ಬಳಿಕ ಸುರಕ್ಷಿತವಾಗಿ ಇಳಿಯಿತು ಹಾಗೂ ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನದಿಂದ ಹೊರಬಂದರು.
ಹಾರಾಟದ ಬಳಿಕ, ವಿಮಾನದ ಎರಡನೇ ಇಂಜಿನ್‌ನಲ್ಲಿ ಕೀಲೆಣ್ಣೆ ಒತ್ತಡ ಕಡಿಮೆ ಇರುವುದನ್ನು ಸಿಬ್ಬಂದಿ ಗಮನಿಸಿದರು. ಸ್ವಲ್ಪ ಸಮಯದ ಬಳಿಕ ಒತ್ತಡವು ಶೂನ್ಯಕ್ಕೆ ಕುಸಿಯಿತು. ಪೈಲಟ್‌ಗಳು ಆ ಇಂಜಿನನ್ನು ಬಂದ್ ಮಾಡಿದರು ಹಾಗೂ ವಿಮಾನವನ್ನು ತಿರುಗಿಸಿದರು. ಬಳಿಕ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ನಾಗರಿಕ ವಾಯುಯಾನ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.