×
Ad

ಏರ್ ಇಂಡಿಯಾ ವಿಮಾನ ಅಪಘಾತ: ಕುಟುಂಬವು ಸಾಂಕೇತಿಕ ಅಂತ್ಯಸಂಸ್ಕಾರ ನಡೆಸಿದ ಬಳಿಕ ತಾಳೆಯಾದ ಕೊನೆಯ ಡಿಎನ್‌ಎ ಸ್ಯಾಂಪಲ್

Update: 2025-06-28 16:25 IST

Photo credit: PTI

ಅಹ್ಮದಾಬಾದ್: ಆಷಾಢಿ ಬೀಜ್ ದಿನವಾಗಿದ್ದ ಶುಕ್ರವಾರ ಕಚ್ಛಿಗಳು ತಮ್ಮ ಹೊಸ ವರ್ಷವನ್ನು ಆಚರಿಸಿದ್ದಾರೆ. ಆದರೆ ಖಿಮಾನಿ ಕುಟುಂಬ ದುಃಖದಲ್ಲಿ ಮುಳುಗಿದೆ. ಅವರು ಜೂ.12ರಂದು ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್‌ಇಂಡಿಯಾ ವಿಮಾನ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರ ಅನಿಲ ಖಿಮಾನಿ(32)ಯನ್ನು ಕಳೆದುಕೊಂಡಿದ್ದಾರೆ. 241 ಮೃತ ಶರೀರಗಳ ಪೈಕಿ ಈವರೆಗೆ ಡಿಎನ್‌ಎ ಪರೀಕ್ಷೆಯ ಮೂಲಕ ಗುರುತಿಸಲು ಸಾಧ್ಯವಾಗಿರದ ಏಕೈಕ ಮೃತದೇಹ ಅವರದು ಎನ್ನುವುದು ಅವರ ದುಃಖವನ್ನು ಹೆಚ್ಚಿಸಿತ್ತು ಎಂದು indianexpress.com ವರದಿ ಮಾಡಿದೆ.

ಗೌರವಯುತ ವಿದಾಯ ಹೇಳಲು ಸಾಧ್ಯವಾಗದ ಅಪರಾಧ ಪ್ರಜ್ಞೆಯಿಂದ ಹೊರಬರಲು ಖಿಮಾನಿ ಕುಟುಂಬವು ಭುಜ್ ಜಿಲ್ಲೆಯ ತಮ್ಮ ಸ್ವಗ್ರಾಮ ದಹಿಂಸರಾದಲ್ಲಿ ಗುರುವಾರ ‘ಸಾಂಕೇತಿಕ’ ಅಂತ್ಯಸಂಸ್ಕಾರವನ್ನು ನಡೆಸಿದ್ದು, ಶುಕ್ರವಾರ ಪ್ರಾರ್ಥನಾ ಸಭೆಯನ್ನು ನಡೆಸಿದೆ.

ಆದರೆ,ಪ್ರಾರ್ಥನಾ ಸಭೆಯ ಕೆಲವೇ ಗಂಟೆಗಳ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿರಿಯ ಸರಕಾರಿ ಅಧಿಕಾರಿಯೋರ್ವರು ಕೊನೆಗೂ ಡಿಎನ್‌ಎ ಮಾದರಿಯನ್ನು ತಾಳೆ ಹಾಕಲು ಸಾಧ್ಯವಾಗಿದ್ದು, ಅನಿಲ್ ಮೃತದೇಹವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಮೃತದೇಹವು ಕರಕಲಾಗಿದ್ದು, ಕೊಳೆತಿತ್ತು. ಹೀಗಾಗಿ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಲು ಹಲವಾರು ಸುತ್ತಿನ ಪ್ರಕ್ರಿಯೆಗಳನ್ನು ನಡೆಸಬೇಕಾಗಿತ್ತು. ಆದರೂ ಅಂತಿಮವಾಗಿ ಡಿಎನ್‌ಎ ತಾಳೆಯಾಗಿದ್ದು, ಈ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದರು.

ಶುಕ್ರವಾರ ಬೆಳಿಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅನಿಲ್ ಅವರ ಅಣ್ಣ ರಾಕೇಶ್,‌ ‘ಅಪಘಾತ ಸಂಭವಿಸಿ ಎರಡು ವಾರಗಳೇ ಕಳೆದು ಹೋಗಿವೆ. ನಮ್ಮ ಸ್ವಾಮಿನಾರಾಯಣ ಸಂಪ್ರದಾಯಗಳ ಪ್ರಕಾರ ನಾವು 12 ದಿನಗಳಲ್ಲಿ ಉತ್ತರ ಕ್ರಿಯೆಗಳನ್ನು ನಡೆಸಬೇಕು. ಇದೇ ಕಾರಣದಿಂದ ನಾವು ಸಾಂಕೇತಿಕ ಅಂತ್ಯಸಂಸ್ಕಾರವನ್ನು ನಡೆಸಿದ್ದೇವೆ. ಅನಿಲ್ ಪತ್ನಿ ಮತ್ತು ಕುಟುಂಬ ಅವರೂ ಅಪಘಾತದಲ್ಲಿ ಬದುಕುಳಿದಿರಬಹುದು ಎಂಬ ಭರವಸೆಯನ್ನು ಹೊಂದಿದ್ದರು. ಆದರೆ ಸತ್ಯವು ಕಹಿಯಾಗಿದೆ ಮತ್ತು ಅದನ್ನು ನಾವು ಒಪ್ಪಿಕೊಳ್ಳಬೇಕು. ಇದೆಲ್ಲವೂ ವಿಧಿಲಿಖಿತ ಮತ್ತು ದೇವರ ಇಚ್ಛೆ ಎಂದು ಹೇಳಿದರು.

‘ನಿರಾಕರಣೆಯಲ್ಲಿ ಬದುಕಿರುವುದಕ್ಕೆ ಯಾವುದೇ ಅರ್ಥವಿಲ್ಲ. ಅನಿಲ್‌ಗೆ ಐದು ವರ್ಷ ಮತ್ತು ಐದು ತಿಂಗಳು ಪ್ರಾಯದ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಅವರ ಭವಿಷ್ಯವನ್ನು ಪರಿಹಾರದ ಹಣದಿಂದ ಸುಭದ್ರಗೊಳಿಸಬಹುದು. ಆದರೆ ನನ್ನ ತಮ್ಮನನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇವೆ’ ಎಂದು ರಾಕೇಶ್ ಹೇಳಿದರು.

ಅನಿಲ್ ಟೈಲ್ಸ್ ಅಳವಡಿಕೆಯಲ್ಲಿ ಪರಿಣತಿಯನ್ನು ಹೊಂದಿದ್ದರು. ತನ್ನ ದೂರದ ಸಂಬಂಧಿಗಳ ಆಹ್ವಾನದ ಮೇರೆಗೆ ಲಂಡನ್‌ನಲ್ಲಿ ಆರು ತಿಂಗಳು ವಾಸವಾಗಿರಲು ಅವರು ವಿಮಾನದಲ್ಲಿ ಅಲ್ಲಿಗೆ ಮೊದಲ ಬಾರಿಗೆ ಪ್ರಯಾಣಿಸುತ್ತಿದ್ದರು.

ಹಿಂದೆ ಸೇಶಲ್ಸ್‌ನಲ್ಲಿದ್ದ ಅನಿಲ್ ಭಾರತಕ್ಕೆ ಹಿಂದಿರುಗಿ ಕುಟುಂಬದ ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಭವಿಷ್ಯದಲ್ಲಿ ಬ್ರಿಟನ್‌ಗೆ ಸ್ಥಳಾಂತರಗೊಳ್ಳುವ ಅವಕಾಶಗಳನ್ನು ಅನ್ವೇಷಿಸಲು ತನ್ನ ಲಂಡನ್ ಭೇಟಿಯನ್ನು ಬಳಸಿಕೊಳ್ಳಲು ಅವರು ಉದ್ದೇಶಿಸಿದ್ದರು ಎಂದು ರಾಕೇಶ್ ತಿಳಿಸಿದರು.

ಈ ನಡುವೆ ಗುರುವಾರ ಬ್ರಿಟಿಷ್ ಪ್ರಜೆ,‌ ವೆಲ್‌ನೆಸ್ ಫೌಂಡ್ರಿಯ ಸಹಸ್ಥಾಪಕ ಫಿಯೊಂಗಲ್ ಚುಚುಲೇನ್ ಅವರ ಮೃತದೇಹವನ್ನು ಇಲ್ಲಿ ಅವರ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ. ಅವರ ಸಂಗಾತಿ ಜೇಮಿ ರೇ ಮಾರ್ಕ್ ಅವರ ಮೃತದೇಹವನ್ನು ಈ ಮೊದಲೇ ಗುರುತಿಸಿ ಹಸ್ತಾಂತರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News