×
Ad

ಚುನಾವಣೆಗೆ ಶ್ರೀರಾಮನನ್ನೂ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಲಿದೆ: ಶಿವಸೇನೆ ನಾಯಕ ಆಕ್ರೋಶ

Update: 2023-12-30 13:47 IST

ಸಂಜಯ್ ರಾವುತ್ (PTI) 

ಮುಂಬೈ: ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಶನಿವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ರಾಜಕೀಯಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯು ಶೀಘ್ರದಲ್ಲೇ ಶ್ರೀ ರಾಮನನ್ನು ತಮ್ಮ ಅಭ್ಯರ್ಥಿಯನ್ನಾಗಿ ಚುನಾವಣೆಗೆ ಘೋಷಿಸಲಿದೆ ಎಂದು ರಾವತ್ ವ್ಯಂಗ್ಯವಾಡಿದ್ದಾರೆ.

ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಆಹ್ವಾನದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ರಾಮನ ಹೆಸರಿನಲ್ಲಿ ತುಂಬಾ ರಾಜಕೀಯ ಮಾಡಲಾಗುತ್ತಿದೆ. ಇನ್ನು, ಬಿಜೆಪಿಯು ಚುನಾವಣೆಗೆ ಭಗವಾನ್ ರಾಮನೇ ತಮ್ಮ ಅಭ್ಯರ್ಥಿ ಎಂದು ಘೋಷಿಸುವುದು ಮಾತ್ರ ಬಾಕಿ ಉಳಿದಿದೆ" ಎಂದು ಹೇಳಿದರು.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯು ಬಿಜೆಪಿ ಕಾರ್ಯಕ್ರಮವಾಗಿದೆ. ರಾಷ್ಟ್ರೀಯ ಕಾರ್ಯಕ್ರಮವಾಗಿ ಉಳಿದಿಲ್ಲ ಎಂದು ರಾವುತ್ ಗುರುವಾರ ಹೇಳಿದ್ದರು. ಬಿಜೆಪಿಯವರು ರಾಮನನ್ನು ಅಪಹರಿಸಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ವಿಗ್ರಹ ಪ್ರತಿಷ್ಠಾಪನೆ ಸಮಾರಂಭದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪಾಲ್ಗೊಳ್ಳುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಠಾಕ್ರೆ ಖಂಡಿತವಾಗಿಯೂ ಹೋಗುತ್ತಾರೆ ಆದರೆ ಬಿಜೆಪಿಯ ಕಾರ್ಯಕ್ರಮ ಮುಗಿದ ನಂತರವೇ. ಬಿಜೆಪಿ ಕಾರ್ಯಕ್ರಮಕ್ಕೆ ಏಕೆ ಹೋಗಬೇಕು? ಇದು ರಾಷ್ಟ್ರೀಯ ಕಾರ್ಯಕ್ರಮವಲ್ಲ. ಬಿಜೆಪಿ ಈ ಕಾರ್ಯಕ್ರಮಕ್ಕಾಗಿ ರ್‍ಯಾಲಿಗಳನ್ನು ನಡೆಸುತ್ತಿದೆ ಮತ್ತು ಸಾಕಷ್ಟು ಪ್ರಚಾರ ಮಾಡುತ್ತಿದೆ ಆದರೆ ಅದರಲ್ಲಿ ಶುದ್ಧತೆ ಎಲ್ಲಿದೆ," ರಾವುತ್ ಪ್ರಶ್ನಿಸಿದರು.

"ದೇಶವು ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದ ಸಮಸ್ಯೆಗಳನ್ನು ಮರೆತುಬಿಡಬೇಕೆಂದು ಬಿಜೆಪಿ ಬಯಸುತ್ತದೆ" ಎಂದು ಅವರು ಆರೋಪಿಸಿದ್ದಾರೆ.

"ಶಿವಸೇನಾ ಕಾರ್ಯಕರ್ತರು ಈ ದೇವಾಲಯಕ್ಕಾಗಿ ತಮ್ಮ ರಕ್ತವನ್ನು ಸುರಿಸಿದ್ದಾರೆ. ಸಾವಿರಾರು ಸೈನಿಕರು ಕರಸೇವೆಯ ಭಾಗವಾಗಿದ್ದರು. (ಪಕ್ಷದ ಸಂಸ್ಥಾಪಕ) ಬಾಳಾಸಾಹೇಬ್ ಠಾಕ್ರೆ ಅವರು ಕಾರ್ಯಕರ್ತರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿದ್ದರು" ಎಂದು ರಾವುತ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News