×
Ad

ಮಧ್ಯಪ್ರದೇಶ | ಚುನಾವಣೋತ್ತರ ಹಿಂಸಾಚಾರ ; ಗ್ರಾಮಕ್ಕೆ ನುಗ್ಗಿ ದಲಿತರ ಮೇಲೆ ದಾಳಿ, ಮನೆಗಳಿಗೆ ಬೆಂಕಿ

Update: 2024-11-14 21:24 IST

ಸಾಂದರ್ಭಿಕ ಚಿತ್ರ | PC ; freepik.com

ಭೋಪಾಲ (ಮಧ್ಯಪ್ರದೇಶ) : ಮಧ್ಯಪ್ರದೇಶದ ವಿಜಯಪುರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಬುಧವಾರ ಪೂರ್ಣಗೊಂಡ ಬಳಿಕ ಇಲ್ಲಿನ ದಲಿತ ಪ್ರಾಬಲ್ಯದ ಗ್ರಾಮವೊಂದಕ್ಕೆ ದುಷ್ಕರ್ಮಿಗಳ ಗುಂಪೊಂದು ನುಗ್ಗಿ ಜನರಿಗೆ ಹಲ್ಲೆ ನಡೆಸಿದ, ಮನೆಗಳಿಗೆ ಬೆಂಕಿ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಉಪ ಚುನಾವಣೆ ಪೂರ್ಣಗೊಂಡ ಬಳಿಕ ಗೋಹ್ಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 200 ಗೂಂಡಾಗಳು ಈ ಗ್ರಾಮಕ್ಕೆ ನುಗ್ಗಿದ್ದಾರೆ. ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಟ್ರಾನ್ಸ್‌ ಫಾರ್ಮರ್, 6 ವಿದ್ಯುತ್ ಕಂಬ ಹಾಗೂ ಜಾನುವಾರು ಮೇವಿಗೆ ಕಿಚ್ಚಿರಿಸಿದ್ದಾರೆ. ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಂಬೇಡ್ಕರ್ ಪ್ರತಿಮೆಯನ್ನು ನಾಶ ಮಾಡಿದ್ದಾರೆ. ಇದರಿಂದ ಭಯಭೀತರಾದ ಜನರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದುಕೊಂಡರು.

ಈ ನಡುವೆ ಪರಿಸ್ಥಿತಿಯ ಗಂಭೀರತೆಯ ಹೊರತಾಗಿಯೂ ಅಪರಾಧ ಎಸಗಿದವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಚುನಾವಣೆ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಈ ಹಿಂಸಾಚಾರಕ್ಕೆ ಕಾರಣವಾಗಿದೆ. ಪೊಲೀಸ್ ತಂಡ ಕೂಡಲೇ ಸ್ಥಳಕ್ಕೆ ತಲುಪಿತು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು ಎಂದು ವಿಜಯಪುರ ಪೊಲೀಸ್ ಠಾಣೆಯ ಉಸ್ತುವಾರಿ ಪಪ್ಪು ಸಿಂಗ್ ಯಾದವ್ ತಿಳಿಸಿದ್ದಾರೆ.

ಇತರರ ನಿರ್ದೇಶನದಂತೆ ಮತದಾನ ಮಾಡಲು ನಿರಾಕರಿಸುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಗೊಹ್ಟಾ ಗ್ರಾಮದ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News