×
Ad

ಮಧ್ಯಪ್ರದೇಶ | ಸುಳ್ಳು ಸಾಕ್ಷಿಗಳ ಆಧಾರದ ಮೇಲೆ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದು; ಆಕ್ರೋಶ ವ್ಯಕ್ತಪಡಿಸಿದ ಹೈಕೋರ್ಟ್

Update: 2025-08-03 10:59 IST

ಮಧ್ಯಪ್ರದೇಶ ಹೈಕೋರ್ಟ್‌

ಭೋಪಾಲ್/ಜಬಲ್ಪುರ: ತಮ್ಮ ಮಗಳು/ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ತಂದೆ-ಮಗನ ವಿರುದ್ಧದ ಶಿಕ್ಷೆಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಗೊಳಿಸಿದೆ.

ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳ ದೌರ್ಬಲ್ಯ ಮತ್ತು ಸುಳ್ಳು ಸಾಕ್ಷಿಗಳ ಆಧಾರದ ಮೇಲೆ ಇಬ್ಬರು ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶ ಹೈಕೋರ್ಟ್ ವಿಭಾಗಿಯ ಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನ್ಯಾಯಾಲಯವು ಪ್ರಕರಣದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಶಿಕ್ಷೆ ರದ್ದುಪಡಿಸಿ, ಅಪರಾಧ ತನಿಖೆಯ ಗಂಭೀರ ವೈಫಲ್ಯವನ್ನು ಉಲ್ಲೇಖಿಸಿದೆ.

ಈ ಹಿನ್ನೆಲೆಯಲ್ಲಿ, ನ್ಯಾಯಾಲಯ ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪ್ರಕರಣದಲ್ಲಿ ಭಾಗಿಯಾದ ತನಿಖಾಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಜೊತೆಗೆ, ಸೂಕ್ತ ಮಾರ್ಗಸೂಚಿಗಳನ್ನು ರಚಿಸಿ ಭವಿಷ್ಯದಲ್ಲಿ ನಿಷ್ಪಕ್ಷಪಾತ ತನಿಖೆಗಾಗಿ ಕಟ್ಟುನಿಟ್ಟಾದ ಕ್ರಮ ಜಾರಿಗೆ ತರಬೇಕೆಂದು ತಿಳಿಸಿದೆ.

2023ರ ನವೆಂಬರ್‌ನಲ್ಲಿ ಮಾಂಡ್ಲಾ ಸೆಷನ್ಸ್ ನ್ಯಾಯಾಲಯವು ನೈನ್ ಸಿಂಗ್ ಧುರ್ವೆ ಮತ್ತು ಅವರ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆರೋಪದ ಪ್ರಕಾರ, ಇಬ್ಬರೂ ವ್ಯಕ್ತಿಗಳು ತಮ್ಮ ಮಗಳು/ ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದ ರಾಜೇಂದ್ರ ಎಂಬ ಯುವಕನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಹತ್ಯೆಯಾದ ರಾಜೇಂದ್ರ ಎಂಬ ವ್ಯಕ್ತಿ 2021ರ ಸೆಪ್ಟೆಂಬರ್ 19ರಂದು ನಾಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ಪ್ರಕಾರ ಅವರು 3–4 ದಿನಗಳ ನಂತರ ಮೃತಪಟ್ಟಿದ್ದಾರೆ. ಆದರೆ, ಅವರ ಮೊಬೈಲ್‌ ಕರೆ ದಾಖಲೆಗಳು ಮೃತ ವ್ಯಕ್ತಿಯು ಸೆಪ್ಟೆಂಬರ್ 25ರ ವರೆಗೆ ಆರೋಪಿಯ ಮಗಳು/ ಸಹೋದರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳುತ್ತದೆ!

"ಮೃತ ವ್ಯಕ್ತಿಯೊಬ್ಬರನ್ನು ಮೊಬೈಲ್ ಫೋನ್ ಮೂಲಕ ಸಂಪರ್ಕಿಸಲು ಮತ್ತು ಆರೋಪಿಯ ಮಗಳೊಂದಿಗೆ ಮಾತನಾಡಲು ಸಾಧ್ಯವಾಗುವಷ್ಟು ವಿಜ್ಞಾನ ಇನ್ನೂ ಅಭಿವೃದ್ಧಿ ಹೊಂದಿಲ್ಲ. ಇದು ಮಧ್ಯಪ್ರದೇಶ ರಾಜ್ಯದಲ್ಲಿ ತನಿಖೆಯ ಸ್ಥಿತಿ ಎಷ್ಟು ಅಪ್ರಾಮಾಣಿಕವಾಗಿದೆ ಎಂಬುದನ್ನು ಬಹಿರಂಗಪಡಿಸುವ ಮತ್ತೊಂದು ಲೋಪವಾಗಿದೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಾಸಿಕ್ಯೂಷನ್, ಸಾಕ್ಷಿಗಳನ್ನು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ತನಿಖೆ ನಡೆಸುವ ಬದಲು ಆರೋಪಪಟ್ಟಿ ಸಲ್ಲಿಸಲು ಸುಳ್ಳಿನ ಕಥೆ ಹೆಣೆದಿದ್ದಾರೆ" ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯ, ಪ್ರಕರಣ ಸಂಬಂಧಿತ ಎಲ್ಲಾ ದಾಖಲೆಗಳ ಪ್ರತಿಯನ್ನು ಸರ್ಕಾರಿ ವಕೀಲ ಅಜಯ್ ತಾಮ್ರಕರ್ ಮೂಲಕ ಡಿಜಿಪಿಗೆ ಸಲ್ಲಿಸಿ, ಮೂವತ್ತು ದಿನಗಳೊಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ನೀಡುವಂತೆ ನಿರ್ದೇಶಿಸಿದೆ.

ಪ್ರಸಕ್ತ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿ ಹಾಜರು ಪಡಿಸಲಾದ ಚೇತ್ ಸಿಂಗ್ ಎಂಬ ವ್ಯಕ್ತಿಯ ಬಗ್ಗೆ ನ್ಯಾಯಾಲಯವು ಪ್ರಾಸಿಕ್ಯೂಷನ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿತು. ಕೇರಳದಲ್ಲಿ ಕೆಲಸ ಹುಡುಕುತ್ತಿದ್ದ ಚೇತ್ ಸಿಂಗ್ ರನ್ನು ಪ್ರಕರಣ ನಡೆದ ಐದು ತಿಂಗಳ ನಂತರ ಕರೆತರಲಾಗಿತ್ತು.

ಪ್ರಾಸಿಕ್ಯೂಷನ್ ಪ್ರಕಾರ, ಸೆಪ್ಟೆಂಬರ್ 19, 2021 ರ ರಾತ್ರಿ, ರಾಜೇಂದ್ರ ಕಾಣೆಯಾದ ದಿನ, ಚೇತ್ ಸಿಂಗ್ ಬೈಕ್‌ನಲ್ಲಿ ಏನೋ ತೊಂದರೆಯಾಗಿದ್ದರಿಂದ ಆರೋಪಿಗಳ ಮನೆಯಲ್ಲಿ ಉಳಿದುಕೊಂಡಿದ್ದರು, ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಶಬ್ದ ಕೇಳಿ ತಡರಾತ್ರಿ ಎಚ್ಚರವಾದಾಗ, ಆರೋಪಿಗಳು ಯಾರನ್ನೋ ಹೊಡೆಯುತ್ತಿರುವುದನ್ನು ಚೇತ್ ಸಿಂಗ್ ನೋಡಿದ್ದಾರೆ. ಆದರೆ ಆ ವ್ಯಕ್ತಿ ಯಾರೆಂದು ಸಾಕ್ಷಿ ಗೆ ತಿಳಿದಿಲ್ಲ. ಆ ವ್ಯಕ್ತಿಯು ಆರೋಪಿಗಳ ಮಗಳು/ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ರಾಜೇಂದ್ರ ಆಗಿರಬೇಕು ಎಂದು ಪೊಲೀಸರು ಊಹಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ!

ಇಷ್ಟೆಲ್ಲಾ ನಡೆದಿದ್ದರೂ ರಾಜೇಂದ್ರನ ಕುಟುಂಬದ ಯಾವುದೇ ಸದಸ್ಯರು ಪೊಲೀಸರಿಗೆ ಈ ಸಂಬಂಧದ ಬಗ್ಗೆ ಬಹಿರಂಗಪಡಿಸದಿರುವುದು ಅಥವಾ ಆರೋಪಿಗಳು ರಾಜೇಂದ್ರನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸದಿರುವುದು ಅಚ್ಚರಿ ತಂದಿದೆ ಎಂದು ಹೈಕೋರ್ಟ್ ಹೇಳಿತು. ಇದಲ್ಲದೆ, ಪೊಲೀಸರು ಆ ಹುಡುಗಿಗೆ ರಾಜೇಂದ್ರನೊಂದಿಗೆ ಸಂಬಂಧವಿದೆಯೇ ಮತ್ತು ಆಕೆಯ ತಂದೆ/ಸಹೋದರರು ಇದಕ್ಕೆ ವಿರುದ್ಧವಾಗಿದ್ದಾರೆಯೇ ಎಂದು ಪ್ರಶ್ನಿಸದೇ ಇರುವುದನ್ನು ಬೆಟ್ಟು ಮಾಡಿದೆ.

ಪ್ರಕರಣದ ಸನ್ನಿವೇಶಗಳಿಗೆ ಕಥೆ ಹೆಣೆದ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಲು ಚೇತ್ ಸಿಂಗ್ ಅವರನ್ನು ಸಾಂದರ್ಭಿಕ ಸಾಕ್ಷಿಯನ್ನಾಗಿ ಬಳಸಿಕೊಂಡಿದೆ . ಘಟನೆ ನಡೆದ ಹಳ್ಳಿಗೆ ಮರಳಿ ಕರೆತಂದ ನಂತರ ರಾಜೇಂದ್ರನ ಸಾವಿನ ಬಗ್ಗೆ ಚೇತ್ ಸಿಂಗ್ ಗೆ ನಿಜವಾಗಿಯೂ ತಿಳಿದುಬಂದಿದೆ ಎಂದು ಹೈಕೋರ್ಟ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News