‘ಹಕ್’ ಚಿತ್ರದ ಬಿಡುಗಡೆ ವಿರುದ್ಧ ಶಾಬಾನು ಪುತ್ರಿಯ ಅರ್ಜಿ ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್
ಮಧ್ಯಪ್ರದೇಶ ಹೈಕೋರ್ಟ್ |Photo Credit : PTI
ಭೋಪಾಲ್,ನ.6: ‘ಹಕ್’ ಹಿಂದಿ ಚಿತ್ರದ ಬಿಡುಗಡೆಯ ವಿರುದ್ಧ ಶಾಬಾನು ಪುತ್ರಿ ಸಿದ್ದೀಕಾ ಬೇಗಂ ಖಾನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ. ‘ಹಕ್’ಚಿತ್ರವು ಕಾಲ್ಪನಿಕವಾಗಿದೆ ಮತ್ತು ಕೇವಲ 1985ರ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರೇರಿತವಾಗಿದೆ ಎಂದು ಅದರ ಡಿಸ್‌ಕ್ಲೈಮರ್ (ಹಕ್ಕು ನಿರಾಕರಣೆ) ಸ್ಪಷ್ಟವಾಗಿ ಹೇಳಿದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿತು.
ಇಮ್ರಾನ್ ಹಶ್ಮಿ ಮತ್ತು ಯಾಮಿ ಗೌತಮ ನಟಿಸಿರುವ ಈ ಚಿತ್ರವು ಶುಕ್ರವಾರ ಬಿಡುಗಡೆಯಾಗಲಿದೆ.
ಸರ್ವೋಚ್ಚ ನ್ಯಾಯಾಲಯದ 1985ರ ತೀರ್ಪು ಶಾಬಾನು ವಿಚ್ಛೇದನದ ಬಳಿಕ ತನ್ನ ಪತಿಯಿಂದ ಜೀವನಾಂಶವನ್ನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದೆ. ಮುಸ್ಲಿಮ್ ವೈಯಕ್ತಿಕ ಕಾನೂನಿನಡಿ ಪುರುಷನು ತನ್ನ ವಿಚ್ಛೇದಿತ ಪತ್ನಿಯನ್ನು ಮೂರು ತಿಂಗಳು ಮಾತ್ರ ಬೆಂಬಲಿಸುವ ಬಾಧ್ಯತೆಯನ್ನು ಹೊಂದಿರುತ್ತಾನೆ. ಇದ್ದತ್ ಎಂದು ಕರೆಯಲಾಗುವ ಈ ಅವಧಿಯ ಬಳಿಕ ವಿಚ್ಛೇದನ ಪೂರ್ಣಗೊಳ್ಳುತ್ತದೆ ಮತ್ತು ಪುರುಷನು ಬಾಧ್ಯತೆಯಿಂದ ಮುಕ್ತನಾಗುತ್ತಾನೆ.
ಆದರೆ 1973ರಲ್ಲಿ ಆಗಿನ ಇಂದಿರಾ ಗಾಂಧಿ ಸರಕಾರವು ಅಪರಾಧ ಪ್ರಕ್ರಿಯಾ ಸಂಹಿತೆಗೆ(ಸಿಆರ್‌ಪಿಸಿ) ತಿದ್ದುಪಡಿಯನ್ನು ತಂದ ಬಳಿಕ ಮುಸ್ಲಿಮರು ಸೇರಿದಂತೆ ಎಲ್ಲ ವಿಚ್ಛೇದಿತ ಮಹಿಳೆಯರು ಜೀವನಾಂಶಕ್ಕೆ ಅರ್ಹರಾದರು.
1985ರಲ್ಲಿ ಕೆಳ ನ್ಯಾಯಾಲಯಗಳ ತೀರ್ಪು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಎಲ್ಲ ಸಮುದಾಯಗಳಿಗೆ ಅನ್ವಯವಾಗುವ ಕಾನೂನಿನ ಜೀವನಾಂಶ ನಿಬಂಧನೆಯಡಿ ಶಾಬಾನುಗೆ ಜೀವನ ನಿರ್ವಹಣೆ ಮೊತ್ತವನ್ನು ಪಾವತಿಸುವಂತೆ ಅವರ ವಿಚ್ಛೇದಿತ ಪತಿಗೆ ನಿರ್ದೇಶನ ನೀಡಿತ್ತು.
‘ಹಕ್’ ಚಿತ್ರದ ಬಿಡುಗಡೆ ವಿರುದ್ಧ ತನ್ನ ಅರ್ಜಿಯಲ್ಲಿ ಸಿದ್ದೀಕಾ ಬೇಗಂ, ಚಿತ್ರವು ತನ್ನ ತಾಯಿಯ ಬದುಕಿನ ವೈಯಕ್ತಿಕ ಅಂಶಗಳನ್ನು ತಿರುಚಿದೆ ಎಂದು ವಾದಿಸಿದ್ದರು.