ಮಹಾರಾಷ್ಟ್ರ: ಲಿಫ್ಟ್ ಕುಸಿತ, 7 ಕಾರ್ಮಿಕರು ಸಾವು
Maharashtra: Lift collapse, 7 workers killed
Photo: PTI
ಮುಂಬೈ: ಥಾಣೆಯ ಘೋಡ್ಬಂದರ್ ರಸ್ತೆಯ ಬಲ್ಕುಂ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ 40 ಮಹಡಿಯ ಕಟ್ಟಡದ ಲಿಫ್ಟ್ ರವಿವಾರ ಸಂಜೆ ಕುಸಿದು ಸಂಭವಿಸಿದ ದುರಂತದಲ್ಲಿ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕಟ್ಟಡದ ನೆಲಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದ್ದ ಲಿಫ್ಟ್ ನಿಂದ ಎಳೆದು ಹೊರ ತೆಗೆಯಲಾಗಿದ್ದ ಕಾರ್ಮಿಕ ಸುನಿಲ್ ಕುಮಾರ್ (21) ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.
ಆದರೆ, ಗಂಭೀರ ಗಾಯಗೊಂಡಿದ್ದ ಅವರು ರವಿವಾರ ರಾತ್ರಿ ಮೃತಪಟ್ಟರು ಎಂದು ಥಾಣೆ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಘಟಕದ ವರಿಷ್ಠ ಯಾಸಿನ್ ತಡ್ವಿ ಹೇಳಿದ್ದಾರೆ.
‘‘ಕಾರ್ಮಿಕರು ಕೆಲಸ ಪೂರ್ಣಗೊಳಿಸಿ 40ನೇ ಮಹಡಿಯಿಂದ ಸಂಜೆ 7.30ಕ್ಕೆ ಲಿಫ್ಟ್ ಪ್ರವೇಶಿಸಿದ ಸಂದರ್ಭ ಅದು ಕುಸಿದು ಹಾಗೂ ಪಿ3 (ಪಾರ್ಕಿಂಗ್ ಪ್ರದೇಶದ ಮೂರನೇ ಮಟ್ಟದ ಪಾರ್ಕಿಂಗ್ ಪ್ರದೇಶ)ಯಲ್ಲಿ ಬಿತ್ತು’’ ಎಂದು ಅವರು ತಿಳಿಸಿದ್ದಾರೆ. ಲಿಫ್ಟ್ ನ ಕೇಬಲ್ ತುಂಡಾಗಿರುವುದು ದುರಂತ ಸಂಭವಿಸಲು ಕಾರಣ ಎಂದು ಅವರು ಹೇಳಿದ್ದಾರೆ. ಗುತ್ತಿಗೆದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.