2008ರ ಮಾಲೇಗಾಂವ್ ಸ್ಫೋಟ ಪ್ರಕರಣ | ಜುಲೈ 31ರಂದು ಎನ್‌ಐಎ ವಿಶೇಷ ನ್ಯಾಯಾಲಯದಿಂದ ತೀರ್ಪು ಸಾಧ್ಯತೆ
ಸಾಂದರ್ಭಿಕ ಚಿತ್ರ | NIA
ಮುಂಬೈ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ತೀರ್ಪು ಜುಲೈ 31ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಇಲ್ಲಿನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ಗುರುವಾರ ಹೇಳಿದೆ.
ಈ ಪ್ರಕರಣ ಬೃಹತ್ ದಾಖಲೆಗಳನ್ನು ಹೊಂದಿದ್ದು, ತೀರ್ಪು ನೀಡಲು ಸ್ಪಲ್ಪ ಸಮಯ ಬೇಕಾಗುತ್ತದೆ ಎಂದು ಅದು ಹೇಳಿದೆ.
ಸ್ಫೋಟ ಸಂಭವಿಸಿದ ಸರಿಸುಮಾರು 17 ವರ್ಷಗಳ ಬಳಿಕ ಎನ್‌ಐಎ ನ್ಯಾಯಾಲಯ ಎಪ್ರಿಲ್ 19ರಂದು ತೀರ್ಪನ್ನು ಆರಂಭದಲ್ಲಿ ಮೇ 8ಕ್ಕೆ ಕಾಯ್ದಿರಿಸಿತ್ತು. ಆದರೆ, ವಿಶೇಷ ನ್ಯಾಯಾಧೀಶ ಎ.ಕೆ. ಲಾಹೋಟಿ ಅವರು ಅನಂತರ ದಿನಾಂಕವನ್ನು ಮುಂದೂಡಿದರು.
2008 ಸೆಪ್ಟಂಬರ್ 29ರಂದು ಉತ್ತರ ಮಹಾರಾಷ್ಟ್ರದ ಮುಂಬೈಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಪಟ್ಟಣವಾದ ಮಾಲೇಗಾಂವ್‌ನಲ್ಲಿರುವ ಮಸೀದಿಯ ಸಮೀಪ ನಿಲ್ಲಿಸಲಾಗಿದ್ದ ಸ್ಫೋಟಕ ತುಂಬಿದ್ದ ಮೋಟಾರು ಸೈಕಲ್ ಸ್ಫೋಟಗೊಂಡಿತ್ತು. ಇದರಿಂದ 6 ಮಂದಿ ಸಾವನ್ನಪ್ಪಿದ್ದರು ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ವಿಚಾರಣೆ ಸಂದರ್ಭ ಪ್ರಾಸಿಕ್ಯೂಷನ್ 323 ಸಾಕ್ಷಿಗಳನ್ನು ಪರಿಶೀಲನೆ ನಡೆಸಿತ್ತು. ಇವರಲ್ಲಿ 34 ಮಂದಿ ಪ್ರತಿಕೂಲ ಸಾಕ್ಷಿಗಳಾದರು.
ಈ ಪ್ರಕರಣದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ನಿಯಮಗಳ ಅಡಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಬಿಜೆಪಿ ನಾಯಕಿ ಪ್ರಜ್ಞಾ ಠಾಕೂರ್, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಹೀರ್ಕರ್, ಸುಧಾಕರ ದ್ವಿವೇದಿ, ಸುಧಾಕರ ಚತುರ್ವೇದಿ ಹಾಗೂ ಸಮೀರ್ ಕುಲಕರ್ಣಿ ವಿಚಾರಣೆ ಎದುರಿಸುತ್ತಿದ್ದಾರೆ.
ಈ ಪ್ರಕರಣವನ್ನು 2011ರಲ್ಲಿ ಎನ್‌ಐಎಗೆ ಹಸ್ತಾಂತರಿಸುವುದಕ್ಕಿಂತ ಮುನ್ನ ಆರಂಭದಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ತನಿಖೆ ನಡೆಸುತ್ತಿತ್ತು.