×
Ad

ಮಧ್ಯಪ್ರಾಚ್ಯ ಸಂಘರ್ಷ | ಇಂಧನ ಪೂರೈಕೆಗೆ ಬೆಂಬಲಿಸಲು G7 ಸಿದ್ಧ; ಸ್ಟಾಕ್‌ ಪೈಲ್ ಬಿಡುಗಡೆಗೂ ಸೂಚನೆ

Update: 2026-03-09 21:33 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ, ಮಾ. 9: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮತ್ತು ಅನಿಲ ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಇಂಧನ ಪೂರೈಕೆಯನ್ನು ಸ್ಥಿರವಾಗಿರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಅಗತ್ಯವಿದ್ದರೆ ತುರ್ತು ತೈಲ ನಿಕ್ಷೇಪಗಳನ್ನು (ಸ್ಟಾಕ್‌ ಪೈಲ್) ಬಿಡುಗಡೆ ಮಾಡುವುದೂ ಸೇರಿದಂತೆ ಕ್ರಮಗಳನ್ನು ಕೈಗೊಳ್ಳಲು ತಾವು ಸಿದ್ಧ ಎಂದು ಅವರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.

ಫ್ರಾನ್ಸ್ ಸೋಮವಾರ ಆಯೋಜಿಸಿದ್ದ ವೀಡಿಯೊ ಕಾನ್ಫರೆನ್ಸ್ ನ ಬಳಿಕ ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. “ಸ್ಟಾಕ್‌ ಪೈಲ್ ಬಿಡುಗಡೆಯಂತಹ ಕ್ರಮಗಳನ್ನು ಒಳಗೊಂಡಂತೆ ಜಾಗತಿಕ ಇಂಧನ ಪೂರೈಕೆಯನ್ನು ಬೆಂಬಲಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರ ಪರಿಣಾಮವಾಗಿ ಸೋಮವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಬ್ಯಾರೆಲ್ ಗೆ 119 ಡಾಲರ್ ಗಿಂತ ಹೆಚ್ಚಾಗಿವೆ.

ಈ ಹಿನ್ನೆಲೆಯಲ್ಲಿ ಯುದ್ಧದ ಪರಿಣಾಮಗಳು ಮತ್ತು ಇಂಧನ ಮಾರುಕಟ್ಟೆಯ ಸ್ಥಿತಿಗತಿಗಳ ಕುರಿತು ಚರ್ಚಿಸಲು ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಆನ್ ಲೈನ್ ಸಭೆ ನಡೆಸಿದರು.

ಸಭೆಯ ನಂತರ ಜಪಾನ್ ನ ಹಣಕಾಸು ಸಚಿವ ಸತ್ಸುಕಿ ಕಟಯಾಮಾ ಮಾತನಾಡಿ, ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ತುರ್ತು ತೈಲ ನಿಕ್ಷೇಪಗಳನ್ನು ಜಂಟಿಯಾಗಿ ಬಿಡುಗಡೆ ಮಾಡುವಂತೆ ಕರೆ ನೀಡಿದೆ ಎಂದು ತಿಳಿಸಿದರು.

‘ಪ್ರತಿಯೊಂದು ದೇಶವೂ ಸಂಘಟಿತ ರೀತಿಯಲ್ಲಿ ತೈಲ ನಿಕ್ಷೇಪಗಳನ್ನು ಬಿಡುಗಡೆ ಮಾಡಬೇಕೆಂದು IEA ಒತ್ತಾಯಿಸಿದೆ’ ಎಂದು ಕಟಯಾಮಾ ಹೇಳಿದರು.

ಇರಾನ್ ನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಬೆಲೆ ಏರಿಕೆಯ ಕುರಿತು ಸಭೆಯಲ್ಲಿ ಸಚಿವರು ಚರ್ಚೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News