×
Ad

Nationwide bank strike: ಬ್ಯಾಂಕ್ ನೌಕರರ ಮುಷ್ಕರ ಯಾಕೆ? ಬೇಡಿಕೆಗಳೇನು?

Update: 2026-01-27 13:52 IST

Photo credit: PTI

ವಾರದಲ್ಲಿ 5 ದಿನ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬ್ಯಾಂಕ್ ನೌಕರರು ಇಂದು (ಜನವರಿ 27) ರಾಷ್ಟ್ರ ವ್ಯಾಪಿ ಮುಷ್ಕರ ನಡೆಸುತ್ತಿದ್ದಾರೆ. ಜನವರಿ 23 ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾಗದೇ ಇರುವುದರಿಂದ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ(UFBU) ಈ ಮುಷ್ಕರಕ್ಕೆ ಕರೆ ನೀಡಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC), ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟ (NCBE), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (AIBOA), ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (BEFI), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (INBOC), ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಘಟನೆ (NOBW) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ (NOBO) ಗಳನ್ನು ಒಳಗೊಂಡಿದೆ. ಬ್ಯಾಂಕ್ ನೌಕರರು ನಡೆಸುತ್ತಿರುವ ಈ ಮುಷ್ಕರ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಲಿದೆ.

ಯಾಕಾಗಿ ಈ ಮುಷ್ಕರ?

ವಾರದಲ್ಲಿ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರುವಂತೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೂ ಮೊದಲು, ಭಾರತೀಯ ಬ್ಯಾಂಕುಗಳ ಸಂಘ (IBI) ಮತ್ತು ಯುಎಫ್‌ಬಿಯು ನಡುವೆ ಮಾರ್ಚ್ 2024 ರಲ್ಲಿ ವೇತನ ಪರಿಷ್ಕರಣಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಲ್ಲಿ ಎರಡೂ ಕಡೆಯವರು ಎಲ್ಲಾ ಶನಿವಾರಗಳನ್ನು ರಜಾದಿನಗಳನ್ನಾಗಿ ಮಾಡಲು ಒಪ್ಪಿಕೊಂಡರು. ಆದಾಗ್ಯೂ, ಈ ನಿರ್ಧಾರವನ್ನು ಇನ್ನೂ ಜಾರಿಗೆ ತರಲಾಗಿಲ್ಲ, ಇದರಿಂದಾಗಿ ಒಕ್ಕೂಟಗಳು ಒತ್ತಡವನ್ನು ಹೆಚ್ಚಿಸಿವೆ.

ಪ್ರಸ್ತುತ, ಬ್ಯಾಂಕುಗಳು ಪ್ರತಿ ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರಗಳಲ್ಲಿ ತೆರೆದಿರುತ್ತವೆ . ರವಿವಾರ ಹೊರತುಪಡಿಸಿ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ. ನೌಕರರು ವಾರದ ದಿನಗಳಲ್ಲಿ ಪ್ರತಿದಿನ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ಒಪ್ಪಿದ್ದು, ಐದು ದಿನಗಳ ಕೆಲಸ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಯುಎಫ್‌ಬಿಯು ಹೇಳಿದೆ.

1947 ರ ಕೈಗಾರಿಕಾ ವಿವಾದ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ UFBU, IBA, ಮುಖ್ಯ ಕಾರ್ಮಿಕ ಆಯುಕ್ತರು ಮತ್ತು ಹಣಕಾಸು ಸೇವೆಗಳ ಇಲಾಖೆ (DFS) ಗೆ ಮುಷ್ಕರದ ನೋಟೀಸ್ ನೀಡಿದೆ. ಸರ್ಕಾರವು ನಮ್ಮ ನಿಜವಾದ ಬೇಡಿಕೆಗೆ ಸ್ಪಂದಿಸದಿರುವುದು ದುರದೃಷ್ಟಕರ. ಸೋಮವಾರದಿಂದ ಶುಕ್ರವಾರದವರೆಗೆ ನಾವು ಪ್ರತಿದಿನ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ಒಪ್ಪಿಕೊಂಡಿರುವುದರಿಂದ ಕೆಲಸದ ಸಮಯದಲ್ಲಿ ನಷ್ಟವಾಗುವುದಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (AIBOC) ಪ್ರಧಾನ ಕಾರ್ಯದರ್ಶಿ ರೂಪಮ್ ರಾಯ್ ಹೇಳಿರುವುದಾಗಿ ಎಕನಾಮಿಕ್ ಟೈಮ್ಸ್‌ ವರದಿ ಮಾಡಿದೆ.

ಇದರ ನಂತರ, ಮುಖ್ಯ ಕಾರ್ಮಿಕ ಆಯುಕ್ತರು ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ಬುಧವಾರ (ಜನವರಿ 21) ಮತ್ತು ಗುರುವಾರ (ಜನವರಿ 22) ರಂದು ಸಂಧಾನ ಸಭೆಗಳನ್ನು ನಡೆಸಿದರು. ಆದರೆ ಚರ್ಚೆಯ ನಂತರವೂ, ಯಾವುದೇ ಸಕಾರಾತ್ಮಕ ಫಲಿತಾಂಶ ಲಭಿಸಿಲ್ಲ ಎಂದು ಒಕ್ಕೂಟಗಳು ತಿಳಿಸಿವೆ.

ಸಂಧಾನ ಪ್ರಕ್ರಿಯೆಯ ಸಮಯದಲ್ಲಿ ವಿವರವಾದ ಚರ್ಚೆಗಳ ಹೊರತಾಗಿಯೂ, ನಮ್ಮ ಬೇಡಿಕೆಯ ಬಗ್ಗೆ ಯಾವುದೇ ಭರವಸೆ ಸಿಗಲಿಲ್ಲ. ಆದ್ದರಿಂದ, ನಾವು ಮುಷ್ಕರಕ್ಕೆ ಕರೆ ನೀಡಬೇಕಾಯಿತು ಎಂದು UFBU ಘಟಕವಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) ಪ್ರಧಾನ ಕಾರ್ಯದರ್ಶಿ ಸಿ.ಎಚ್. ​​ವೆಂಕಟಾಚಲಂ ಹೇಳಿದ್ದಾರೆ.

ಬ್ಯಾಂಕ್ ಉದ್ಯೋಗಿಗಳು ಸ್ವಂತ ಯೋಗಕ್ಷೇಮವನ್ನು ಬದಿಗಿರಿಸಿ ಭಾರತದ ಆರ್ಥಿಕ ಸ್ಥಿರತೆ, ಸೇರ್ಪಡೆ ಮತ್ತು ಬೆಳವಣಿಗೆಗೆ ಶಕ್ತಿ ತುಂಬುತ್ತಾರೆ.ವಾರಕ್ಕೆ 5 ದಿನಗಳ ಕೆಲಸ ರಿಯಾಯಿತಿಯಲ್ಲ, ಇದು ದೀರ್ಘಕಾಲದಿಂದ ಬಾಕಿ ಇರುವ ಸುಧಾರಣೆಯಾಗಿದೆ. ಬದ್ಧತೆಯು ದಾಖಲೆಯಲ್ಲಿದೆ. ಅದನ್ನು ಕಾರ್ಯಗತಗೊಳಿಸಬೇಕು ಎಂದು UFBU ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದೆ.

ಬ್ಯಾಂಕುಗಳ ಬೇಡಿಕೆಗಳೇನು?

ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಮುಷ್ಕರ ನಡೆಸಲಾಗುತ್ತಿದೆಯೇ ಹೊರತು ಗ್ರಾಹಕ ಸೇವೆಗಳನ್ನು ಅಡ್ಡಿಪಡಿಸಲು ಅಲ್ಲ ಎಂದು ಒಕ್ಕೂಟದ ನಾಯಕರು ಹೇಳಿದ್ದಾರೆ .

“ಈ ಆಂದೋಲನ ಗ್ರಾಹಕರ ವಿರುದ್ಧವಲ್ಲ, ಬದಲಾಗಿ ಸುಸ್ಥಿರ, ಮಾನವೀಯ ಮತ್ತು ಪರಿಣಾಮಕಾರಿ ಬ್ಯಾಂಕಿಂಗ್ ವ್ಯವಸ್ಥೆಗಾಗಿ ಮಾಡುತ್ತಿದ್ದೇವೆ. ವಿಶ್ರಾಂತಿ ಪಡೆದ ಬ್ಯಾಂಕರ್ ರಾಷ್ಟ್ರಕ್ಕೆ ಉತ್ತಮವಾಗಿ ಸೇವೆ ಸಲ್ಲಿಸುತ್ತಾನೆ. ಸಮತೋಲಿತ ಕಾರ್ಯಪಡೆಯು ಆರ್ಥಿಕ ಸ್ಥಿರತೆಯನ್ನು ಬಲಪಡಿಸುತ್ತದೆ. ಐದು ದಿನಗಳ ಬ್ಯಾಂಕಿಂಗ್ ಐಷಾರಾಮಿ ಅಲ್ಲ, ಅದು ಆರ್ಥಿಕ ಮತ್ತು ಮಾನವನ ಅವಶ್ಯಕತೆಯಾಗಿದೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟದ (ಎನ್‌ಸಿಬಿಇ) ಪ್ರಧಾನ ಕಾರ್ಯದರ್ಶಿ ಎಲ್ ಚಂದ್ರಶೇಖರ್ ಹೇಳಿದ್ದಾರೆ.

ಯಾವ ಬ್ಯಾಂಕ್ ಗಳ ಸೇವೆ ಲಭ್ಯ? ಯಾವುದು ಇರಲ್ಲ?

ಮುಷ್ಕರದಿಂದಾಗಿ ಕೆಲವು ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗಲಿದೆ, ಆದರೆ ತಂತ್ರಜ್ಞಾನದ ಬಳಕೆಯಿಂದ, ಬಹು ಪರ್ಯಾಯಗಳು ಅಸ್ತಿತ್ವದಲ್ಲಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಗದು ಠೇವಣಿ ಮತ್ತು ಹಿಂಪಡೆಯುವಿಕೆ, KYC, ಮನೆ ಬಾಗಿಲಿಗೆ ಬ್ಯಾಂಕಿಂಗ್, ಚೆಕ್ ಕ್ಲಿಯರೆನ್ಸ್ ಮತ್ತು ದಿನನಿತ್ಯದ ಆಡಳಿತಾತ್ಮಕ ಕೆಲಸಗಳಂತಹ ಸೇವೆಗಳು ಪರಿಣಾಮ ಬೀರುವ ನಿರೀಕ್ಷೆಯಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ (BoB), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಇತರ ಸಾರ್ವಜನಿಕ ವಲಯದ ಬ್ಯಾಂಕುಗಳಂತಹ ಪ್ರಮುಖ ಸರ್ಕಾರಿ ಸ್ವಾಮ್ಯದ ಸಾಲದಾತರ ಮೇಲೆ ಮುಷ್ಕರವು ಪರಿಣಾಮ ಬೀರುತ್ತದೆ. ಆದಾಗ್ಯೂ, HDFC ಬ್ಯಾಂಕ್, ICICI ಬ್ಯಾಂಕ್ , ಕೋಟಕ್ ಮಹೀಂದ್ರಾ ಮತ್ತು Axis ಬ್ಯಾಂಕ್ ಸೇರಿದಂತೆ ಖಾಸಗಿ ವಲಯದ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಆದಾಗ್ಯೂ, ಗ್ರಾಹಕರು ನಗದು ಅಗತ್ಯಗಳಿಗಾಗಿ ಸ್ವಯಂಚಾಲಿತ ಠೇವಣಿ ಮತ್ತು ಹಿಂಪಡೆಯುವಿಕೆ ಯಂತ್ರ (ATM/ADWM) ಬಳಕೆಯಂತಹ ವಿವಿಧ ಅಗತ್ಯಗಳಿಗಾಗಿ ಡಿಜಿಟಲ್ ಚಾನೆಲ್‌ಗಳನ್ನು ಬಳಸಬಹುದು.ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಕೆಲವಡೆ ಎಟಿಎಂ ನಗದು ಲಭ್ಯತೆ ಇರುವುದಿಲ್ಲ.

ಎಸ್‌ಬಿಐ ಸೇರಿದಂತೆ ಹಲವಾರು ಸಾರ್ವಜನಿಕ ವಲಯದ ಬ್ಯಾಂಕುಗಳು ಮುಷ್ಕರದ ಸಂಭಾವ್ಯ ಪರಿಣಾಮದ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿವೆ.

ಮುಷ್ಕರದ ದಿನದಂದು ತನ್ನ ಶಾಖೆಗಳು ಮತ್ತು ಕಚೇರಿಗಳು ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರೂ, ಮುಷ್ಕರದಿಂದ ಬ್ಯಾಂಕಿನ ಕೆಲಸದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಸ್‌ಬಿಐ ಹೇಳಿದೆ

ಭಾರತೀಯ ರಿಸರ್ವ್ ಬ್ಯಾಂಕ್, LIC, ಷೇರು ವಿನಿಮಯ ಕೇಂದ್ರಗಳು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳು ಈಗಾಗಲೇ ಐದು ದಿನಗಳ ವೇಳಾಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News