ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಬೀರಿದ ನೌಕರರ ರಾಷ್ಟ್ರವ್ಯಾಪಿ ಮುಷ್ಕರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ವಾರದಲ್ಲಿ ಐದು ದಿನಗಳ ಕೆಲಸಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವೆಗಳ ಮೇಲೆ ಪರಿಣಾಮ ಬೀರಿದೆ.
ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಂಧಾನ ಸಭೆ ಸಕಾರಾತ್ಮಕ ಫಲಿತಾಂಶವನ್ನು ನೀಡದ ಕಾರಣ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರತಿನಿಧಿಸುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.
"ಯಾವುದೇ ಸಕಾರಾತ್ಮಕ ಫಲಿತಾಂಶ ಬರದ ಕಾರಣ ಮತ್ತು ಸರಕಾರ ನಮ್ಮ ಬೇಡಿಕೆಗೆ ಒಪ್ಪದ ಕಾರಣ ಈ ಮುಷ್ಕರವನ್ನು ನಾವು ಅನಿವಾರ್ಯವಾಗಿ ನಡೆಸಬೇಕಾಗಿದೆ. ನಮ್ಮ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ" ಎಂದು AIBEA(All India Bank Employees Association) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರು ತಿಳಿಸಿದ್ದಾರೆ.
ಮಂಗಳವಾರದ ಮುಷ್ಕರದಲ್ಲಿ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರಿಂದ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಹೆಚ್ಚಿನ ಶಾಖೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಲ್ಪಟ್ಟಿದ್ದವು.
ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳು ಮತ್ತು ಕೆಲ ಖಾಸಗಿ ವಲಯದ ಬ್ಯಾಂಕುಗಳ ಶಾಖೆಗಳಲ್ಲಿ ನಗದು ಠೇವಣಿ, ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಆಡಳಿತಾತ್ಮಕ ಕೆಲಸಗಳಂತಹ ಸೇವೆಗಳ ಮೇಲೆ ಪ್ರತಿಭಟನೆ ಪರಿಣಾಮ ಬೀರಿವೆ.
ಆದರೆ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳು ನೌಕರರು ಮುಷ್ಕರದ ಒಕ್ಕೂಟಗಳ ಭಾಗವಾಗಿಲ್ಲದ ಕಾರಣ ಅವುಗಳ ಕಾರ್ಯಾಚರಣೆಗಳು ಹೆಚ್ಚಾಗಿ ಪರಿಣಾಮ ಬೀರಿಲ್ಲ ಎಂದು ವರದಿಯಾಗಿದೆ.
ಬ್ಯಾಂಕ್ ನೌಕರರು ಮುಷ್ಕರ ಘೋಷಿಸಿದರೂ, ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಮೂಲಕ ಲಭ್ಯವಾಗುವ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿದೆ.