×
Ad

ʼಸಿಎಂ ಹುದ್ದೆಗೆ 500 ಕೋಟಿ ರೂ. ಸೂಟ್‌ ಕೇಸ್ʼ ಹೇಳಿಕೆ; ನವಜೋತ್ ಕೌರ್ ಸಿಧು ಕಾಂಗ್ರೆಸ್‌ ನಿಂದ ಅಮಾನತು

Update: 2025-12-08 22:09 IST

 ನವಜೋತ್ ಕೌರ್ ಸಿಧು | Photo Credit  : ANI  

ಚಂಡೀಗಡ,ಡಿ.8: ವಿವಾದಾತ್ಮಕ ‘ 500 ಕೋಟಿ ರೂ.ಗಳ ಸೂಟ್‌ಕೇಸ್’ ಹೇಳಿಕೆಗಾಗಿ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಅವರನ್ನು ಕಾಂಗ್ರೆಸ್ ಪಕ್ಷವು ಸೋಮವಾರ ಅಮಾನತುಗೊಳಿಸಿದೆ.

ನವಜೋತ್ ಕೌರ್ ಅವರು ‘ 500 ಕೋಟಿ ರೂ.ಗಳಿರುವ ಸೂಟ್‌ ಕೇಸ್ ನೀಡಿದ ವ್ಯಕ್ತಿಯು ಮುಖ್ಯಮಂತ್ರಿಯಾಗುತ್ತಾನೆ’’ಎಂದು ಸುದ್ದಿಗಾರರ ಮುಂದೆ ಹೇಳಿಕೆ ನೀಡಿದ್ದುದು ಪಕ್ಷದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ಅವರ ಈ ಹೇಳಿಕೆ ಕಾಂಗ್ರೆಸ್‌ ಗೆ ಮುಜುಗರವನ್ನು ತಂದರೆ, ಬಿಜೆಪಿ ಹಾಗೂ ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಕ್ಷಗಳಿಗೆ ಬತ್ತಳಿಕೆಯನ್ನು ನೀಡಿದ್ದವು.

ಮಾಜಿ ಶಾಸಕಿಯೂ ಆದ ನವಜೋತ್ ಕೌರ್ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ ತನ್ನ ವಿವಾದಾತ್ಮಕ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಲು ಯತ್ನಿಸಿದ್ದಾರೆ. ‘‘ ನಾನು ನೇರವಾಗಿ ನೀಡಿದ ಅನಿಸಿಕೆಗೆ,ಹೊಸ ತಿರುವನ್ನು ನೀಡಿರುವುದನ್ನು ಕಂಡು ನನಗೆ ಆಘಾತವಾಗಿದೆ. ನಮ್ಮಿಂದ ಕಾಂಗ್ರೆಸ್ ಪಕ್ಷ ಈವರೆಗೆ ಏನನ್ನೂ ಆಗ್ರಹಿಸಿಲ್ಲ. ನವಜೋತ್ ಸಿಂಗ್ ಅವರು ಯಾವುದೇ ಪಕ್ಷದಿಂದ ಮುಖ್ಯಮಂತ್ರಿಯಾಗಬಲ್ಲರೇ ಎಂಬ ಪ್ರಶ್ನೆಗೆ ನಾನು,ಮುಖ್ಯಮಂತ್ರಿ ಹುದ್ದೆಯನ್ನು ಪಡೆಯಲು ನಮ್ಮ ಬಳಿ ಹಣವಿಲ್ಲ ಎಂದು ನಾನು ಹೇಳಿದ್ದೆ. ನನ್ನ ಹೇಳಿಕೆಯನ್ನು ಗಮನವಿಟ್ಟು ಕೇಳಿ’’ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ನವಜೋತ್ ಕೌರ್ ಅವರು ಡಿಸೆಂಬರ್ 6ರಂದು ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ಬಳಿಕ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ನವಜೋತ್ ಸಿಂಗ್ ಸಿಧು ಅವರು ಸಕ್ರಿಯ ರಾಜಕಾರಣಕ್ಕೆ ಯಾಕೆ ಮರಳಿಲ್ಲವೆಂಬ ಸುದ್ದಿಗಾರರ ಪ್ರಶ್ನೆಗೆ ಅವರು, 2027ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪತಿಯನ್ನು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದಲ್ಲಿ ಮಾತ್ರವೇ ಅವರು ವಾಪಾಸಾಗಲಿದ್ದಾರೆಂದು ಹೇಳಿದ್ದರು. ಮುಖ್ಯಮಂತ್ರಿ ಹುದ್ದೆಯನ್ನು ಖರೀದಿಸಲು ನಮ್ಮಲ್ಲಿ 500 ಕೋಟಿ ರೂ. ಇಲ್ಲವೆಂದೂ ಆಕೆ ಹೇಳಿದ್ದರು. ಅವರ ಈ ಹೇಳಿಕೆಯನ್ನು ಅಸ್ತ್ರವಾಗಿ ಮಾಡಿಕೊಂಡ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳು, ಕಾಂಗ್ರೆಸ್‌ನಲ್ಲಿ ಹಣದ ಚೀಲದ ರಾಜಕಾರಣ ಅಸ್ತಿತ್ವದಲ್ಲಿದೆಯೆಂದು ವಾಗ್ದಾಳಿ ನಡೆಸಿದ್ದವು.

ಈ ಮಧ್ಯೆ ಸಿಧು ದಂಪತಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಕಾಂಗ್ರೆಸ್ ಪಕ್ಷದ ನಾಯಕ ಸುಖಜಿಂದರ್ ರಾಂಧಾವಾ ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News