ʼಆಪರೇಷನ್ ಸಿಂಧೂರ್ʼ, ʼಮಹಾದೇವ್ʼ ಕಾರ್ಯಾಚರಣೆಗಾಗಿ ಪ್ರಧಾನಿ ಮೋದಿ, ಸಶಸ್ತ್ರ ಪಡೆಗಳನ್ನು ಅಭಿನಂದಿಸಿ ಎನ್‌ಡಿಎ ನಿರ್ಣಯ
NDA passes resolution praising PM Modi, armed forces for Op Sindoor, Op Mahadev
Photo credit: PTI
ಹೊಸದಿಲ್ಲಿ: 2019,ಆ.5ರಂದು ಆಗಿನ ಜಮ್ಮುಕಾಶ್ಮೀರ ರಾಜ್ಯಕ್ಕೆ ವಿಶೇಷ ಹಕ್ಕುಗಳನ್ನು ನೀಡಿದ್ದ ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಲಾಗಿದ್ದು,ಅದು ಐತಿಹಾಸಿಕ ದಿನವಾಗಿತ್ತು. ಎನ್‌ಡಿಎ ಸರಕಾರವು ಸಂವಿಧಾನವನ್ನು ಅದರ ನಿಜವಾದ ಅರ್ಥದಲ್ಲಿ ಅನುಸರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಇಲ್ಲಿ ಹೇಳಿದರು.
ಆಪರೇಷನ್ ಸಿಂಧೂರ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತನ್ನ ಸರಕಾರವು ದೃಢವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ತನ್ನನ್ನು ಸನ್ಮಾನಿಸಿದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಗೃಹಸಚಿವ ಅಮಿತ್ ಶಾ ಅವರನ್ನೂ ಪ್ರಶಂಸಿಸಿದ ಮೋದಿ, ಅವರು ಸಂಪುಟದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಸಚಿವರಾಗಿದ್ದಾರೆ ಎಂದರು.
ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು,ಆಪರೇಷನ್ ಸಿಂಧೂರ ಕುರಿತು ಆಗ್ರಹಿಸುವ ಮೂಲಕ ತಾನು ತಪ್ಪು ಮಾಡಿದ್ದೇನೆಯೇ ಎಂದು ಅದು ಅಚ್ಚರಿ ಪಡುತ್ತಿರಬೇಕು ಎಂದರು.
ಮೋದಿಯವರ ನಾಯಕತ್ವ ಹಾಗೂ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ ಸಂದರ್ಭಗಳಲ್ಲಿ ಸಶಸ್ತ್ರ ಪಡೆಗಳ ‘ಸರಿಸಾಟಿಯಿಲ್ಲದ ಧೈರ್ಯ ಮತ್ತು ಅಚಲ ಬದ್ಧತೆ’ಯನ್ನು ಶ್ಲಾಘಿಸಿ ನಿರ್ಣಯವನ್ನು ಸಭೆಯು ಅಂಗೀಕರಿಸಿತು.
ಇದು ಜೂನ್ 2024ರಲ್ಲಿ ಸರಕಾರ ರಚನೆಯ ಬಳಿಕ ಸಂಸತ್ ಅಧಿವೇಶನಗಳ ಸಂದರ್ಭ ಎನ್‌ಡಿಎ ಸಂಸದೀಯ ಮಂಡಳಿಯ ಕೇವಲ ಎರಡನೇ ಸಭೆಯಾಗಿದೆ.
‘ಭಾರತ ಮಾತಾ ಕಿ ಜೈ’ ಘೋಷಣೆಗಳ ನಡುವೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಹಿರಿಯ ನಾಯಕರು ಮೋದಿಯವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.