×
Ad

ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಮೃತ್ಯು ಪ್ರಕರಣ: ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಗ್ರಹ

Update: 2026-02-02 11:40 IST

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Photo credit: X/ANI)

ತಿರುವನಂತಪುರಂ: ಜನವರಿ 30ರಂದು ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮಾಲಕ ಸಿ.ಜೆ.ರಾಯ್ ಮೃತ್ಯುಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.

ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಪಿಣರಾಯಿ ವಿಜಯನ್, “ಈ ಘಟನೆ ದೇಶದ ತೆರಿಗೆ ಆಡಳಿತದ ಮೇಲಿನ ಕಪ್ಪು ಚುಕ್ಕೆಯಾಗಿದ್ದು, ದಾಳಿಯ ವೇಳೆ ಗಂಭೀರ ಲೋಪಗಳನ್ನು ಎಸಗಲಾಗಿದೆ” ಎಂದು ಆರೋಪಿಸಿದ್ದಾರೆ.

ಮೃತ ಸಿ.ಜೆ.ರಾಯ್ ಸಹೋದರನ ಕಿರುಕುಳ ಆರೋಪವನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸಿಎಂ ಪಿಣರಾಯಿ ವಿಜಯನ್, “ಆದಾಯ ತೆರಿಗೆ ವಂಚಿಸುವುದು ಗಂಭೀರ ಸಮಸ್ಯೆ ಹಾಗೂ ಅದನ್ನು ಹತ್ತಿಕ್ಕಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂಬ ಬಗ್ಗೆ ನನಗೆ ಸಂಪೂರ್ಣ ಸಹಮತವಿದೆ. ಆದರೆ, ಯಾವುದೇ ಕ್ರಮವು ಸಿ.ಜೆ.ರಾಯ್ ಪ್ರಕರಣದಲ್ಲಾದಂತೆ ಅಮೂಲ್ಯ ಜೀವವನ್ನು ತೆಗೆಯುವಂತಾಗಬಾರದು. ಅದನ್ನು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಸಮರ್ಥಿಸಲು ಸಾಧ್ಯೆವೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ, ತಮ್ಮ ಸಹೋದರನಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದ ಅವರ ಸಹೋದರ, “ನನ್ನ ಸಹೋದರ ಸಂಪೂರ್ಣವಾಗಿ ಸಹಕಾರ ನೀಡಿದ್ದ ಹಾಗೂ ಎಲ್ಲ ದಾಖಲೆಗಳನ್ನೂ ಸಲ್ಲಿಸಿದ್ದ. ಹೀಗಿದ್ದೂ ಅಧಿಕಾರಿಗಳು ಮತ್ತೆ ಮತ್ತೆ ಬರಲು ಪ್ರಾರಂಭಿಸಿದ್ದರು. ಆದಾಯ ತೆರಿಗೆ ಇಲಾಖೆಯ ಸಮಸ್ಯೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆತ ನನಗೆ ಹಲವು ಬಾರಿ ಹೇಳಿದ್ದ” ಎಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News