ನೀಟ್–ಪಿಜಿ ಕಟ್‌ಆಫ್ ಅಂಕ ಕಡಿತ: ಕಾರಣ ಏನು ಗೊತ್ತೇ?
ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ಇರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್–ಪಿಜಿ)ಯಲ್ಲಿ ಅರ್ಹತೆಗೆ ನಿಗದಿಪಡಿಸಿದ ಅಂಕವನ್ನು ಸರ್ಕಾರ ಮಂಗಳವಾರ ಕಡಿತಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ಖಾಲಿ ಉಳಿದಿರುವ 9 ಸಾವಿರ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟುಗಳ ಭರ್ತಿಗೆ ಹಾದಿ ಸುಗಮವಾದಂತಾಗಿದೆ. ದೇಶದಲ್ಲಿ ವೈದ್ಯರ ಕೊರತೆ ಇರುವ ಸಂದರ್ಭದಲ್ಲಿ ತರಬೇತಿ ನೀಡುವ ಸಾಮರ್ಥ್ಯ ಇದ್ದರೂ ದೊಡ್ಡ ಸಂಖ್ಯೆಯ ಸೀಟುಗಳು ವ್ಯರ್ಥವಾಗುತ್ತಿವೆ ಎಂಬ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪರಿಷ್ಕೃತ ಮಾನದಂಡದ ಅನ್ವಯ ಅರ್ಹತೆ ಪಡೆಯಲು ಸಾಮಾನ್ಯ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ಇರಬೇಕಾದ ಕನಿಷ್ಠ ಪರ್ಸೆಂಟೈಲ್ ಅನ್ನು 50ರಿಂದ 7ಕ್ಕೆ ಇಳಿಸಲಾಗಿದೆ. ಅಂತೆಯೇ ಪಿಡಬ್ಲ್ಯುಬಿಡಿ (ಬೆಂಚ್ಮಾರ್ಕ್ ಅಂಗವೈಕಲ್ಯ) ಹೊಂದಿದ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಅರ್ಹತಾ ಪರ್ಸೆಂಟೈಲ್ 45ರಿಂದ 5ಕ್ಕೆ ಇಳಿದಿದೆ. ಎಸ್ಸಿ, ಎಸ್ಟಿ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಪರ್ಸೆಂಟೈಲ್ 40ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಋಣಾತ್ಮಕ ಅಂಕಪದ್ಧತಿ ಇರುವ ಹಿನ್ನೆಲೆಯಲ್ಲಿ ಕಟ್‌ಆಫ್ ಅಂಕವನ್ನು 800ರಲ್ಲಿ 40ಕ್ಕೆ ಇಳಿಸಲಾಗಿದೆ.
ಈ ಸಂಬಂಧ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) ಆದೇಶ ಹೊರಡಿಸಿದ್ದು, ಪರಿಷ್ಕೃತ ಅರ್ಹತಾ ಪರ್ಸೆಂಟೈಲ್‌ನಿಂದಾಗಿ ಕೌನ್ಸಿಲಿಂಗ್ ಮತ್ತು ಪ್ರವೇಶಕ್ಕಾಗಿ ಎಲ್ಲ ವರ್ಗದ ಅಭ್ಯರ್ಥಿಗಳ ಅರ್ಹತೆ ವಿಸ್ತರಿಸಲಾಗಿದೆ. ಈ ವರ್ಷ ನೀಟ್–ಪಿಜಿ ಪರೀಕ್ಷೆಗೆ 2.4 ಲಕ್ಷ ವಿದ್ಯಾರ್ಥಿಗಳು ಹಾಜರಾದರೂ, ಅಧಿಕ ಕಟ್‌ಆಫ್‌ನಿಂದಾಗಿ ಸಾವಿರಾರು ಸೀಟುಗಳು ಭರ್ತಿಯಾಗದೇ ಉಳಿದಿದ್ದವು ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾರತದಲ್ಲಿ ಸದ್ಯ 65ರಿಂದ 70 ಸಾವಿರ ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟುಗಳಿದ್ದು, ಪ್ರತಿ ಏಳರಲ್ಲಿ ಒಂದು ಸೀಟು ಖಾಲಿ ಉಳಿಯುತ್ತಿರುವುದರಿಂದ ಬೋಧನಾ ಆಸ್ಪತ್ರೆಗಳು ದುರ್ಬಲವಾಗುತ್ತವೆ ಹಾಗೂ ಆರೋಗ್ಯ ಸೇವಾ ವ್ಯವಸ್ಥೆ ಹದಗೆಡುತ್ತದೆ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.