×
Ad

ಉದ್ಯೋಗಕ್ಕಾಗಿ ಭೂಮಿ ಹಗರಣ | ಲಾಲು ಪ್ರಸಾದ್ ಯಾದವ್ ತೆಗೆದುಕೊಂಡ ನೇಮಕಾತಿ ನಿರ್ಧಾರಗಳು ಅವರ ಅಧಿಕೃತ ಕರ್ತವ್ಯದ ಭಾಗವಲ್ಲ: ಸಿಬಿಐ

Update: 2026-01-14 12:05 IST

ಲಾಲೂ ಪ್ರಸಾದ್ ಯಾದವ್ (File Photo: PTI)

ಹೊಸದಿಲ್ಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸಬೇಕು ಎಂದು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಸಲ್ಲಿಸಿರುವ ಅರ್ಜಿಗೆ ಮಂಗಳವಾರ ವಿರೋಧ ವ್ಯಕ್ತಪಡಿಸಿದ ಸಿಬಿಐ, ಲಾಲೂ ಪ್ರಸಾದ್ ಯಾದವ್ ರೈಲ್ವೆಯಲ್ಲಿ ಮಾಡಿದ್ದ ನೇಮಕಾತಿಗಳು ಅವರ ಕರ್ತವ್ಯದ ಭಾಗವಾಗಿರಲಿಲ್ಲ ಎಂದು ಹೇಳಿದೆ. ರೈಲ್ವೆ ಸಚಿವರಾಗಿ ಅವರು ಅಂತಹ ನಿರ್ಧಾರಗಳನ್ನು ಕೈಗೊಳ್ಳುವ ಸಾರ್ವಜನಿಕ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಿರಲಿಲ್ಲ. ಬದಲಿಗೆ ಪ್ರಧಾನ ವ್ಯವಸ್ಥಾಪಕರಿಗೆ ಮಾತ್ರ ಅಂತಹ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿತ್ತು ಎಂದು ಸಿಬಿಐ ವಾದಿಸಿತು.

ಸಿಬಿಐ ಪರವಾಗಿ ನ್ಯಾ. ರವೀಂದರ್ ದುಡೇಜಾ ಎದುರು ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಲಾಲೂ ಪ್ರಸಾದ್ ಯಾದವ್ ಅವರ ನಡವಳಿಕೆಯು ಅವರ ಅಧಿಕೃತ ಕೆಲಸ ಅಥವಾ ಕರ್ತವ್ಯಗಳ ವ್ಯಾಪ್ತಿಗೆ ಒಳಪಡದೆ ಇರುವುದರಿಂದ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿ ಅವರ ವಿರುದ್ಧ ತನಿಖೆ ನಡೆಸಲು ಪೂರ್ವಭಾವಿ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

“ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಅಧಿಕೃತ ಕರ್ತವ್ಯ ಅಥವಾ ಕೆಲಸಗಳನ್ನು ನಿರ್ವಹಿಸುವಾಗ ಯಾವುದೇ ಶಿಫಾರಸು ಅಥವಾ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ ಎಂಬುದು ನಮ್ಮ ಪ್ರಕರಣವಾಗಿದೆ. ಹೀಗಾಗಿ, ಅವರು ಮಾಡಿರುವ ಯಾವುದೇ ಶಿಫಾರಸು ಅಥವಾ ನಿರ್ಧಾರ ಅವರ ಅಧಿಕೃತ ಕರ್ತವ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಇಂತಹ ಶಿಫಾರಸು ಅಥವಾ ನಿರ್ಧಾರಗಳನ್ನು ಪ್ರಧಾನ ವ್ಯವಸ್ಥಾಪಕರು ಕೈಗೊಳ್ಳಬಹುದಾಗಿದೆ. ಸಚಿವರಾಗಿ ಅವರಿಗೆ ಯಾವುದೇ ಪಾತ್ರವಿಲ್ಲ” ಎಂದೂ ಅವರು ವಾದಿಸಿದರು.

“ಹೀಗಾಗಿ, ಈ ನೇಮಕಾತಿ ಪ್ರಕರಣದಲ್ಲಿ ರೈಲ್ವೆ ಸಚಿವರಿಗೆ ನೇಮಕಾತಿ ನಿರ್ಧಾರ ಕೈಗೊಳ್ಳುವಲ್ಲಿ ಯಾವುದೇ ಪಾತ್ರವಿಲ್ಲ. ಇದನ್ನು ರೈಲ್ವೆ ಸಚಿವರಾಗಿ ಅವರ ಸಾರ್ವಜನಿಕ ಕರ್ತವ್ಯಗಳೊಂದಿಗೆ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ, ಈ ನೇಮಕಾತಿಗಳಲ್ಲಿ ಅವರಿಗೆ ಯಾವುದೇ ಪಾತ್ರವಿಲ್ಲ” ಎಂದು ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಹೇಳಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾ. ರವೀಂದರ್ ದುಡೇಜಾ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News