ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಕಾಯ್ದೆಯಡಿ ಗೌಪ್ಯತೆಯ ಹಕ್ಕಿದೆ: ದಿಲ್ಲಿ ಹೈಕೋರ್ಟ್
Photo|NDTV
ಹೊಸದಿಲ್ಲಿ: ಪಿಎಂ ಕೇರ್ಸ್ ನಿಧಿ ಸರಕಾರದ ನಿಯಂತ್ರಣದಲ್ಲಿದ್ದರೂ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ ಕಾಯ್ದೆ) ಅಡಿಯಲ್ಲಿ ಗೌಪ್ಯತೆಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ನಾವು ಸಂವಿಧಾನದ ವಿಧಿ 21ರ ಗೌಪ್ಯತಾ ಹಕ್ಕಿನ ಕುರಿತು ಮಾತನಾಡುವುದಿಲ್ಲ. ಬದಲಿಗೆ ಮಾಹಿತಿ ಹಕ್ಕು ಕಾಯ್ದೆ(RTI Act)ಯ ವಿಧಿ 8(1)(j) ಅಡಿಯಲ್ಲಿ ಮೂರನೇ ವ್ಯಕ್ತಿಗಳಿಗೆ ಇರುವ ಹಕ್ಕಿನ ಕುರಿತು ಮಾತನಾಡುತ್ತಿದ್ದೇವೆ ಎಂದು ಹೇಳಿದೆ. ಈ ವಿಧಿಯು ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ನಿರ್ಬಂಧಿಸುತ್ತದೆ.
“ಸರ್ಕಾರವೇ ನಡೆಸುತ್ತಿದ್ದರೂ ಕೇವಲ ಸರಕಾರಿ ಸಂಸ್ಥೆ ಎಂಬ ಕಾರಣಕ್ಕೆ ಗೌಪ್ಯತೆ ಹಕ್ಕು ಕಳೆದುಕೊಳ್ಳುತ್ತದೆಯೆ? ಅದು ಕಳೆದುಕೊಳ್ಳುತ್ತದೆ ಎಂದು ನೀವು ಹೇಗೆ ಹೇಳುತ್ತೀರಿ? ಕೇವಲ ಸಾರ್ವಜನಿಕ ಸಂಸ್ಥೆ ಎಂಬ ಕಾರಣಕ್ಕೆ ಅದರ ಗೌಪ್ಯತೆಯ ಹಕ್ಕನ್ನು ನಿರಾಕರಿಸಲು ಸಾಧ್ಯವೇ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಆರ್‌ಟಿಐ ಕಾಯ್ದೆಯಡಿಯಲ್ಲಿ ಸಾರ್ವಜನಿಕ ಅಥವಾ ಖಾಸಗಿ ಟ್ರಸ್ಟ್‌ನ ಗೌಪ್ಯತೆ ಹಕ್ಕುಗಳಲ್ಲಿ ಯಾವುದೇ ವ್ಯತ್ಯಾಸವಿರಬಾರದು ಎಂದು ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಹೇಳಿದರು.
ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ಕೋರಿ ಪಿಎಂ ಕೇರ್ಸ್ ನಿಧಿ ಸಲ್ಲಿಸಿದ್ದ ಮಾಹಿತಿ ಮತ್ತು ದಾಖಲೆಗಳನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಪೀಠವು ಈ ಹೇಳಿಕೆ ನೀಡಿದೆ.
ಕೇಂದ್ರ ಮಾಹಿತಿ ಆಯೋಗವು ಅರ್ಜಿಯನ್ನು ಅಂಗೀಕರಿಸಿ, ಮಾಹಿತಿಯನ್ನು ಬಹಿರಂಗಪಡಿಸುವಂತೆ ಆದಾಯ ತೆರಿಗೆ ಇಲಾಖೆಗೆ ಈ ಮೊದಲು ನಿರ್ದೇಶನ ನೀಡಿತ್ತು.