×
Ad

ತೆಲಂಗಾಣ | ಚುನಾವಣಾ ಭರವಸೆ ಈಡೇರಿಸಲು ಬೀದಿನಾಯಿಗಳ ಹತ್ಯೆ: ಸರಪಂಚರ ವಿರುದ್ಧ ಪ್ರಕರಣ ದಾಖಲು

ಒಂದು ವಾರದಲ್ಲಿ 500ಕ್ಕೂ ಹೆಚ್ಚು ನಾಯಿಗಳ ಸಾವು

Update: 2026-01-14 07:53 IST

ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಬೀದಿನಾಯಿಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 200 ಬೀದಿನಾಯಿಗಳನ್ನು ಹತ್ಯೆ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಒಟ್ಟಾರೆ 500ಕ್ಕೂ ಹೆಚ್ಚು ಬೀದಿನಾಯಿಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಗ್ರಾಮಪಂಚಾಯತ್ ಚುನಾವಣೆ ವೇಳೆ, ಬೀದಿನಾಯಿ ಹಾವಳಿಯನ್ನು ತಡೆಗಟ್ಟುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದ ಕೆಲ ಸರಪಂಚರು ಹಾಗೂ ಚುನಾಯಿತ ಪ್ರತಿನಿಧಿಗಳು ಈ ಸಾಮೂಹಿಕ ಹತ್ಯಾಕ್ರಮಕ್ಕೆ ಕಾರಣರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಸರಪಂಚರು ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮುನ್ನ ಹನಮ್ಕೊಂಡ ಜಿಲ್ಲೆಯಲ್ಲಿ, ಇಬ್ಬರು ಮಹಿಳಾ ಸರಪಂಚರು ಮತ್ತು ಅವರ ಪತಿಯರು ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಶ್ಯಾಮ್‌ಪೇಟೆ ಮತ್ತು ಅರೇಪಳ್ಳಿ ಗ್ರಾಮಗಳಲ್ಲಿ ಸುಮಾರು 300 ನಾಯಿಗಳನ್ನು ಕೊಲ್ಲಲಾಗಿದೆ ಎಂಬ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.

“ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಗ್ರಾಮಪಂಚಾಯತ್ ಚುನಾವಣೆಗೆ ಮುನ್ನ, ಬೀದಿನಾಯಿ ಹಾಗೂ ಕೋತಿ ಕಾಟವನ್ನು ತಡೆಗಟ್ಟುವುದಾಗಿ ಕೆಲ ಅಭ್ಯರ್ಥಿಗಳು ಭರವಸೆ ನೀಡಿದ್ದರು. ಇದೀಗ ಅವರು ಆ ಭರವಸೆಯನ್ನು ಬೀದಿನಾಯಿಗಳನ್ನು ಕೊಲ್ಲುವ ಮೂಲಕ ಈಡೇರಿಸುತ್ತಿದ್ದಾರೆ” ಎಂದು ಮೂಲಗಳು ಆರೋಪಿಸಿವೆ.

ನಾಯಿಗಳ ಕಳೇಬರಗಳನ್ನು ಗ್ರಾಮದ ಹೊರವಲಯದಲ್ಲಿ ಹೂಳಲಾಗಿದ್ದು, ಪಶುವೈದ್ಯರ ತಂಡ ಅವುಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News