×
Ad

T20 ವಿಶ್ವಕಪ್‌ ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ: ICCಗೆ ಬಿಸಿಬಿ ಪುನರುಚ್ಚಾರ

Update: 2026-01-13 22:20 IST

Photo Credit : PTI 

ಹೊಸದಿಲ್ಲಿ, ಜ.13: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜೊತೆ ನಡೆದ ಸಭೆಯಲ್ಲಿ, ಮುಂಬರುವ 2026ರ ಆವೃತ್ತಿಯ ಟಿ-20 ವಿಶ್ವಕಪ್‌ ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡುವಿನ ಸಭೆ ಇಂದು ಮಧ್ಯಾಹ್ನ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಯಿತು ಎಂದು ಬಿಸಿಬಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಸಭೆಯ ವೇಳೆ ಭದ್ರತಾ ಕಳವಳವನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸದಿರುವ ನಿರ್ಧಾರದ ಕುರಿತು ಬಿಸಿಬಿ ತನ್ನ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಬಾಂಗ್ಲಾದೇಶದ ವಿಶ್ವಕಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿರುವುದನ್ನು ಬಿಸಿಬಿ ಪುನಃ ನೆನಪಿಸಿದೆ.

ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ಐಸಿಸಿ ತಿಳಿಸಿದ್ದು, ತನ್ನ ನಿಲುವನ್ನು ಮರುಪರಿಗಣಿಸುವಂತೆ ಬಿಸಿಬಿಗೆ ಸೂಚಿಸಿದೆ.

ಆದರೆ ಬಿಸಿಬಿಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಸಂಭಾವ್ಯ ಪರಿಹಾರಗಳ ಕುರಿತು ಚರ್ಚೆಯನ್ನು ಮುಂದುವರಿಸಲು ಎರಡೂ ಪಕ್ಕಗಳು ಒಪ್ಪಿಕೊಂಡಿವೆ ಎಂದು ಬಿಸಿಬಿ ಹೇಳಿದೆ.

ಟಿ-20 ವಿಶ್ವಕಪ್ ಟೂರ್ನಿ ಫೆಬ್ರವರಿ 7ರಂದು ಆರಂಭವಾಗಲಿದೆ. ಈಗಿನ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ತಂಡವು ಅದೇ ದಿನ ಕೋಲ್ಕತಾದ ಈಡನ್ ಗಾರ್ಡನ್ಸ್‌ ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ಫೆಬ್ರವರಿ 9ರಂದು ಕೋಲ್ಕತಾದಲ್ಲೇ ಇಟಲಿ ವಿರುದ್ಧ, ನಂತರ 2022ರ ಟಿ-20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಪಂದ್ಯ ನಡೆಯಲಿದೆ. ಫೆಬ್ರವರಿ 17ರಂದು ನೇಪಾಳ ವಿರುದ್ಧ ಆಡುವ ಮೂಲಕ ಬಾಂಗ್ಲಾದೇಶ ತಂಡವು ಲೀಗ್ ಹಂತದ ಪಂದ್ಯಗಳನ್ನು ಮುಗಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News