ಯಾವುದೇ ಕಡತಗಳನ್ನು ಸ್ಥಳಾಂತರಿಸುವಂತಿಲ್ಲ; ಬಿಜೆಪಿ ಗೆಲುವಿನ ಬಳಿಕ ದಿಲ್ಲಿ ಸಚಿವಾಲಯಕ್ಕೆ ಪ್ರವೇಶ ನಿರ್ಬಂಧ!
Photo | indiatoday
ಹೊಸದಿಲ್ಲಿ : ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ದಿಲ್ಲಿ ಸಚಿವಾಲಯದಿಂದ ಫೈಲ್ ಗಳು, ದಾಖಲೆಗಳು, ಡಿಜಿಟಲ್ ದಾಖಲೆಗಳು ಸೇರಿದಂತೆ ಯಾವುದೇ ಕಡತಗಳನ್ನು ಸ್ಥಳಾಂತರಿಸದಂತೆ ನಿರ್ಬಂಧ ವಿಧಿಸಲಾಗಿದೆ ಮತ್ತು ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ ಎಂದು indiatoday ವರದಿ ಮಾಡಿದೆ.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಆಪ್ ಪಕ್ಷವನ್ನು ಸೋಲಿಸಿ ನೂತನ ಸರಕಾರವನ್ನು ರಚಿಸಲು ಬಿಜೆಪಿ ಸಿದ್ಧವಾಗಿದೆ. ಈ ಮಧ್ಯೆ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಸಚಿವಾಲಯದಲ್ಲಿನ ಯಾವುದೇ ಕಡತಗಳನ್ನು ಸ್ಥಳಾಂತರಿಸದಂತೆ ಸೂಚಿಸಿದೆ. ದಾಖಲೆಗಳನ್ನು ರಕ್ಷಿಸಲು ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ.
ಭದ್ರತೆ ಮತ್ತು ದಾಖಲೆಗಳ ಸುರಕ್ಷತೆಯ ದೃಷ್ಟಿಯಿಂದ ಸಾಮಾನ್ಯ ಆಡಳಿತ ಇಲಾಖೆಯ ಅನುಮತಿಯಿಲ್ಲದೆ ದಿಲ್ಲಿ ಸಚಿವಾಲಯದ ಸಂಕೀರ್ಣದ ಹೊರಗೆ ಯಾವುದೇ ಫೈಲ್ ಗಳು, ದಾಖಲೆಗಳು, ಕಂಪ್ಯೂಟರ್ ಹಾರ್ಡ್ ವೇರ್, ಡಿಜಿಟಲ್ ದಾಖಲೆಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಸಾಮಾನ್ಯ ಆಡಳಿತ ಇಲಾಖೆ ಆದೇಶದಲ್ಲಿ ತಿಳಿಸಿದೆ. ಇದಲ್ಲದೆ ದಿಲ್ಲಿ ಸಚಿವಾಲಯದ ಎಲ್ಲಾ ಮಹಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು 24x7 ಕಾರ್ಯನಿರ್ವಹಿಸುತ್ತಿದೆ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಇದಕ್ಕೂ ಮೊದಲು ಸಚಿವಾಲಯವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ ಎಂದು ವರದಿಯಾಗಿದ್ದವು. ಆದರೆ, ಅಧಿಕಾರಿಗಳು ಈ ವರದಿಗಳನ್ನು ತಳ್ಳಿಹಾಕಿದ್ದಾರೆ. ಭದ್ರತೆಯನ್ನು ಬಲಪಡಿಸುವ ಕ್ರಮಗಳನ್ನು ಮಾತ್ರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.