ನ್ಯಾಯಾಂಗ, ಸಿಜೆಐ ವಿರುದ್ಧ ಮಾನಹಾನಿ ಹೇಳಿಕೆ | ನಾವು ಹೂವಿನಷ್ಟು ಕೋಮಲವಲ್ಲ: ಬಿಜೆಪಿಯ ನಿಶಿಕಾಂತ್ ದುಬೆಗೆ ಸುಪ್ರೀಂ ಕೋರ್ಟ್ ತರಾಟೆ
ನಿಶಿಕಾಂತ್ ದುಬೆ | PTI
ಹೊಸದಿಲ್ಲಿ: ತನ್ನ ವಿರುದ್ಧ ಹಾಗೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ನಿಮ್ಮ ಹೇಳಿಕೆಯು ಸುಪ್ರೀಂ ಕೋರ್ಟ್ ಘನತೆಗೆ ಹಾನಿಯೆಸಗುವ ಹಾಗೂ ಅದರ ಅಧಿಕಾರವನ್ನು ತುಚ್ಛೀಕರಿಸುವ ಉದ್ದೇಶ ಹೊಂದಿದೆ ಎಂದು ಕಿಡಿ ಕಾರಿದೆ.
“ಇದೇ ವೇಳೆ, ಇಂತಹ ಹಾಸ್ಯಾಸ್ಪದ ಹೇಳಿಕೆಗಳಿಂದ ಎದೆಗುಂದಲು ನ್ಯಾಯಾಲಯಗಳು ಹೂವಿನಷ್ಟು ಕೋಮಲವಲ್ಲ ಎಂಬುದು ನಮ್ಮ ದೃಢ ಅಭಿಪ್ರಾಯವಾಗಿದೆ” ಎಂದೂ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಚಾಟಿ ಬೀಸಿತು.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಸುಪ್ರೀಂ ಕೋರ್ಟ್ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ನಿಶಿಕಾಂತ್ ದುಬೆ, “ಸುಪ್ರೀಂ ಕೋರ್ಟ್ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ. ದೇಶದಲ್ಲಿ ನಡೆಯುತ್ತಿರುವ ನಾಗರಿಕ ದಂಗೆಗಳಿಗೆ ಮುಖ್ಯ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರೇ ಜವಾಬ್ದಾರರಾಗಿದ್ದಾರೆ”, ಎಂದು ಟೀಕಾಪ್ರಹಾರ ನಡೆಸಿದ್ದರು.
ನಿಶಿಕಾಂತ್ ದುಬೆ ನೀಡಿದ್ದ ಈ ಹೇಳಿಕೆಯ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಮೇ 5ರಂದು ಕೈಗೆತ್ತಿಕೊಂಡಿದ್ದ ನ್ಯಾಯಪೀಠ, ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವವರು ನಾವೇ ಆಗಿದ್ದೇವೆ ಎಂದು ಹೇಳಿದೆ.
ಈ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆಯಾದರೂ, ಗುರುವಾರ ಲಭ್ಯವಾಗಿರುವ ಅದರ ಆದೇಶದಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ವಿರುದ್ಧ ತನ್ನ ತೀಕ್ಷ್ಣ ಅಭಿಪ್ರಾಯವನ್ನು ದಾಖಲಿಸಿದೆ.