×
Ad

ಒಡಿಶಾ | ಅಸ್ವಸ್ಥ ಪತ್ನಿಯನ್ನು ಆಸ್ಪತ್ರೆಗೆ 600 ಕಿ.ಮೀ. ಸೈಕಲ್ ರಿಕ್ಷಾದಲ್ಲೇ ಕರೆದೊಯ್ದ 70ರ ವೃದ್ಧ!

Update: 2026-01-25 08:40 IST

PC: x.com/ndtvindia

ಭುವನೇಶ್ವರ: ಅಸ್ವಸ್ಥ ಪತ್ನಿಯನ್ನು ಚಿಕಿತ್ಸೆಗಾಗಿ ಒಡಿಶಾದ ಸಂಬಲ್ಪುರದಿಂದ ಸುಮಾರು 300 ಕಿಲೋಮೀಟರ್ ದೂರದ ಕಟಕ್‌ನಲ್ಲಿರುವ ಆಸ್ಪತ್ರೆಗೆ 70 ವರ್ಷದ ವೃದ್ಧರೊಬ್ಬರು ಸೈಕಲ್ ರಿಕ್ಷಾದಲ್ಲೇ ಕರೆದೊಯ್ದು, ಚಿಕಿತ್ಸೆಯ ಬಳಿಕ ಮತ್ತೆ ಅದೇ ಸೈಕಲ್ ರಿಕ್ಷಾದಲ್ಲಿ ಮನೆಗೆ ಕರೆತಂದಿರುವ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ. ಆ್ಯಂಬುಲೆನ್ಸ್ ಅಥವಾ ಇತರೆ ವಾಹನ ವ್ಯವಸ್ಥೆಗೆ ಹಣವಿಲ್ಲದ ಕಾರಣ, ವೃದ್ಧಾಪ್ಯ ಮತ್ತು ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಒಟ್ಟು 600 ಕಿಲೋಮೀಟರ್ ದೂರ ಪತ್ನಿಯನ್ನು ಸೈಕಲ್ ರಿಕ್ಷಾದಲ್ಲೇ ಕರೆದೊಯ್ಯುವುದು ಅನಿವಾರ್ಯವಾಯಿತು.

“ನನ್ನ ಜೀವನದಲ್ಲಿ ನನಗೆ ಅತ್ಯಂತ ಪ್ರೀತಿಯಾದ ಎರಡು ವಿಷಯಗಳಿವೆ. ಒಂದು—ನಾನು ಸುರಕ್ಷಿತವಾಗಿ ಮನೆಗೆ ಕರೆತಂದಿರುವ ನನ್ನ ಪತ್ನಿ, ಮತ್ತೊಂದು—ನನ್ನ ಸೈಕಲ್ ರಿಕ್ಷಾ. ಇವೆರಡನ್ನೂ ಬಿಟ್ಟು ನಾನು ಬದುಕಲು ಸಾಧ್ಯವಿಲ್ಲ,” ಎಂದು ರಿಕ್ಷಾ ಎಳೆಯುತ್ತಿದ್ದ ಬಾಬು ಲೋಹರ್ ಹೇಳಿದರು. ಅವರು ಪೊಲೀಸರು ಹಾಗೂ ಸ್ಥಳೀಯರಿಂದ ದೊರೆಯುವ ನೆರವನ್ನೂ ಸ್ವಾಭಿಮಾನದಿಂದ ನಿರಾಕರಿಸಿದರು. ಪತ್ನಿಯನ್ನು ಕುಳ್ಳಿರಿಸಿಕೊಂಡು ಕಟಕ್‌ಗೆ ತೆರಳಲು ಒಂಬತ್ತು ದಿನಗಳು ತಗುಲಿದವು.

ಕಳೆದ ನವೆಂಬರ್‌ನಲ್ಲಿ ಲೋಹರ್ ಅವರ ಪತ್ನಿ ಜ್ಯೋತಿ ಪಾರ್ಶ್ವವಾಯು ಪೀಡಿತರಾದರು. ಸಂಬಲ್ಪುರದ ಮೋದಿಪಾದ ಗ್ರಾಮದ ಅಧಿಕಾರಿಗಳು ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಲ್ಲಿ ಎರಡು ತಿಂಗಳ ಕಾಲ ಚಿಕಿತ್ಸೆ ಪಡೆದ ಬಳಿಕ, ದಂಪತಿ ಜನವರಿ 19ರಂದು ಊರಿಗೆ ಮರಳುವ ಪ್ರಯಾಣ ಆರಂಭಿಸಿದರು.

“ಯಾವುದೇ ವಾಹನ ಬಾಡಿಗೆಗೆ ಪಡೆಯಲು ನನ್ನ ಬಳಿ ಹಣ ಇರಲಿಲ್ಲ. ಆದ್ದರಿಂದ ನನ್ನದೇ ರಿಕ್ಷಾ ವ್ಯಾನ್‌ನಲ್ಲಿ ಪ್ರಯಾಣ ಆರಂಭಿಸಿದೆ. ಹಳೆಯ ದಿಂಬುಗಳನ್ನು ರಿಕ್ಷಾದಲ್ಲಿ ಹಾಕಿ ಪತ್ನಿಯನ್ನು ಮಲಗಿಸಿದೆ. ದೇವರ ನಾಮ ಪಠಿಸುತ್ತಾ ಸೈಕಲ್ ರಿಕ್ಷಾವನ್ನು ಎಳೆದಿದ್ದೇನೆ,” ಎಂದು ಲೋಹರ್ ಹೇಳಿದರು.

ದಿನಕ್ಕೆ ಸರಾಸರಿ 30 ಕಿಲೋಮೀಟರ್‌ಗಳಂತೆ ಪ್ರಯಾಣ ಬೆಳೆಸಿ, ರಾತ್ರಿ ರಸ್ತೆಬದಿ ಅಂಗಡಿಗಳ ಬಳಿ ತಂಗುತ್ತಾ ಒಂಬತ್ತು ದಿನಗಳ ಬಳಿಕ ಕಟಕ್ ಆಸ್ಪತ್ರೆಗೆ ತಲುಪಿದರು. ಎರಡು ತಿಂಗಳ ಚಿಕಿತ್ಸೆ ಬಳಿಕ ಸಂಬಲ್ಪುರದಲ್ಲಿರುವ ಮನೆಗೆ ಜನವರಿ 19ರಂದು ಮರುಪ್ರಯಾಣ ಆರಂಭಿಸಿದ್ದಾಗಿ ಅವರು ವಿವರಿಸಿದರು.

ಮರುಪ್ರಯಾಣದ ವೇಳೆ ಅವರ ಸೈಕಲ್ ರಿಕ್ಷಾಕ್ಕೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಜ್ಯೋತಿ ರಸ್ತೆಗೆ ಬಿದ್ದು ತಲೆಗೆ ಗಾಯವಾಯಿತು. ಲೋಹರ್‌ಗೆ ಯಾವುದೇ ಗಾಯಗಳಾಗಿರಲಿಲ್ಲ. ತಾಂಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಜನವರಿ 20ರಂದು ಮತ್ತೆ ಪ್ರಯಾಣ ಮುಂದುವರಿಸಿದರು. ಈ ಸಾಹಸಯಾತ್ರೆಯನ್ನು ಗಮನಿಸಿದ ಠಾಣಾಧಿಕಾರಿ ಬಿಕಾಶ್ ಸೇಥಿ ನೆರವು ನೀಡಲು ಮುಂದಾದರೂ, ಲೋಹರ್ ಅದನ್ನು ನಯವಾಗಿ ನಿರಾಕರಿಸಿ ತಮ್ಮ ಪ್ರಯಾಣ ಮುಂದುವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News