ಮೋದಿ ಭೇಟಿ ವೇಳೆ ಅಕ್ರಮ ಫ್ಲೆಕ್ಸ್ ಅಳವಡಿಕೆ| ಬಿಜೆಪಿ ನೇತೃತ್ವದ ತಿರುವನಂತಪುರ ನಗರ ಪಾಲಿಕೆಯಿಂದ ಪಕ್ಷದ ಘಟಕಕ್ಕೆ 20 ಲಕ್ಷ ರೂ. ದಂಡ
PC : economictimes
ತಿರುವನಂತಪುರ, ಜ. 24: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭ ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಫ್ಲೆಕ್ಸ್ ಬೋರ್ಡ್, ಬಾವುಟ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿರುವುದಕ್ಕೆ ಬಿಜೆಪಿ ನೇತೃತ್ವದ ತಿರುವನಂತಪುರ ನಗರ ಪಾಲಿಕೆ ಪಕ್ಷದ ತಿರುವನಂತಪುರ ಜಿಲ್ಲಾ ಘಟಕಕ್ಕೆ 20 ಲಕ್ಷ ರೂ. ದಂಡ ವಿಧಿಸಿದೆ.
ಉಚ್ಚ ನ್ಯಾಯಾಲಯದ ನಿರ್ದೇಶನ, ವಿಮಾನ ನಿಲ್ದಾಣದಿಂದ ಪುತರಿಕಂಡಂ ಮೈದಾನದವರೆಗೆ ಪಾದಚಾರಿ ಮಾರ್ಗಗಳು, ರಸ್ತೆ ವಿಭಾಜಕಗಳು, ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕವಾಗಿ ಫ್ಲೆಕ್ಸ್ ಬೋರ್ಡ್, ಧ್ವಜ, ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಸಾರ್ವಜನಿಕರು ತೀವ್ರವಾಗಿ ಟೀಕಿಸಿದ ಹಾಗೂ ನಾಗರಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಈ ನಿರ್ಧಾರ ತೆಗೆದುಕೊಂಡಿದೆ.
ಇದು ನ್ಯಾಯಾಂಗ ನಿಂದನೆ. ಆದುದರಿಂದ ನಾವು ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕ್ರಮ ತೆಗೆದುಕೊಂಡಿದ್ದೇವೆ. 20 ಲಕ್ಷ ರೂ. ದಂಡ ವಿಧಿಸಿದ್ದೇವೆ ಎಂದು ತಿರುವನಂತಪುರ ನಗರ ಪಾಲಿಕೆಯ ಅಧಿಕಾರಿ ತಿಳಿಸಿದ್ದಾರೆ.