ತೆಲಂಗಾಣ| ಆಧಾರ್ ಕಾರ್ಡ್ ಇಲ್ಲದೆ ಹೆರಿಗೆಗಾಗಿ ಅಲೆದಾಡಿದ ಗರ್ಭಿಣಿ
PC : freepik
ಹೈದರಾಬಾದ್, ಜ. 24: ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಗರ್ಭಿಣಿಯೋರ್ವರು ಹೆರಿಗೆಗೆ ದಾಖಲಾಗಲು ಆಸ್ಪತ್ರೆಯಿದ ಆಸ್ಪತ್ರೆಗೆ ಅಲೆದಾಡಿದ ಘಟನೆ ತೆಲಂಗಾಣದ ಕರೀಮ್‌ನಗರದಲ್ಲಿ ನಡೆದಿದೆ.
ಕರೀಂನಗರದ ತಿಮ್ಮಾಪುರ ಮಂಡಲದ ರಾಮಕೃಷ್ಣ ಕಾಲೂನಿ ಗ್ರಾಮದ ನಿವಾಸಿ ಉಬಿದಿ ರೇಖಾ (23)ಅವರು ‘ಬೇಡ ಬುಡಗ ಜಂಗಮ’ ಅಲೆಮಾರಿ ಸಮುದಾಯಕ್ಕೆ ಸೇರಿದವರು. ಅವರು ಹೆರಿಗಾಗಿ ದಾಖಲಾಗಲು ಆಸ್ಪತ್ರೆಗಳಿಗೆ ತೆರಳಿದ್ದರು. ಆದರೆ, ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಅವರನ್ನು ಆಸ್ಪತ್ರೆಗಳಲ್ಲಿ ದಾಖಲಾಸಿಕೊಳ್ಳಲು ನಿರಾಕರಿಸಲಾಗಿದೆ.
ರಾಮಕೃಷ್ಣ ಕಾಲನಿಯ ಗ್ರಾಮದ ಹೆಚ್ಚಿನ ನಿವಾಸಿಗಳು ದಿನ ಕೂಲಿಗಾಗಿ ರಾಜ್ಯಾದ್ಯಂತ ವಲಸೆ ಹೋಗುತ್ತಾರೆ. ರೇಖಾ ಅವರ ಕುಟುಂಬ ಕೂಡ ವಲಸೆಯಲ್ಲಿರುವಾಗ ಅವರು ಜನಿಸಿರುವುದರಿಂದ ಜನನ ನೋಂದಣಿಯಾಗಲಿಲ್ಲ. ಇದರಿಂದ ಅವರಿಗೆ ಆಧಾರ್ ಕಾರ್ಡ್ ದೊರಕಿಲ್ಲ. ಆಧಾರ್ ಕಾರ್ಡ್ ಇಲ್ಲದಿರುವುದರಿಂದ ಅವರಿಗೆ ಯಾವುದೇ ಕಲ್ಯಾಣ ಕಾರ್ಯಕ್ರಮ, ದಿನನಿತ್ಯದ ಆರೋಗ್ಯ ತಪಾಸಣೆ ಹಾಗೂ ಈಗ ಸುರಕ್ಷಿತ ಹೆರಿಗೆ ಸೌಲಭ್ಯ ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಅವರು ಹೆರಿಗೆಗೆ ದಾಖಲಾಗಲು ಕರೀಮ್‌ನಗರದ ತಾಯಿ ಹಾಗೂ ಮಗು ಆಸ್ಪತ್ರೆ ಸೇರಿದಂತೆ ಹಲವು ಸರಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಿದರು. ಆದರೆ, ದಾಖಲಾತಿಗೆ ಆಧಾರ್ ಕಾರ್ಡ್ ನೀಡುವಂತೆ ಅವರಿಗೆ ತಿಳಿಸಲಾಗಿದೆ. ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಭರಿಸುವ ಸಾಮರ್ಥ್ಯವನ್ನು ಅವರ ಕುಟುಂಬ ಹೊಂದಿಲ್ಲ.
ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿದೆ ಎಂಬ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಜಿಲ್ಲಾ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಜಿ. ವೀರ ರೆಡ್ಡಿ, ಪುರಾವೆಗಾಗಿ ಆಧಾರ್ ಕಾರ್ಡ್ ಕೇಳಲಾಗುತ್ತದೆ. ಆಧಾರ್ ಕಾರ್ಡ್ ಇಲ್ಲದ ರೋಗಿಗಳನ್ನು ‘‘ಅಪರಿಚಿತ ವ್ಯಕ್ತಿ’’ ಎಂದು ಪರಿಗಣಿಸಲಾಗುತ್ತದೆ ಹಾಗೂ ಪೊಲೀಸ್ ಹೊರ ಠಾಣೆಗೆ ಮಾಹಿತಿ ನೀಡಲಾಗುತ್ತದೆ. ಆದರೆ, ಚಿಕಿತ್ಸೆಯ ಸೌಲಭ್ಯವನ್ನು ನಿರಾಕರಿಸುವುದಿಲ್ಲ ಎಂದಿದ್ದಾರೆ.
ಸದ್ಯಕ್ಕೆ ಸ್ಥಳೀಯ ರಾಜಕೀಯ ನಾಯಕರ ನೆರವಿನಿಂದ ರೇಖಾ ಅವರಿಗೆ ಗ್ರಾಮ ಪಂಚಾಯತ್‌ನಿಂದ ನಿವಾಸ ಪ್ರಮಾಣ ಪತ್ರ ದೊರೆತಿದೆ. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಆಧಾರ್ ಪೋರ್ಟಲ್ ರೇಖಾ ಅವರ ವಿವರಗಳನ್ನು ಸ್ವೀಕರಿಸದ ಕಾರಣ, ಅವರ ಆಧಾರ್‌ಗೆ ಸಲ್ಲಿಸಿದ ಅರ್ಜಿ ಸ್ಥಗಿತಗೊಂಡಿದೆ.
ಈ ಬಗ್ಗೆ ರೇಖಾ ಅವರು, ‘‘ನನ್ನ ಬಳಿ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ, ನಾನು ತಾಯಿಯಾಗಲು ಸಾಧ್ಯವಿಲ್ಲವೇ ?’’ ಎಂದು ಪ್ರಶ್ನಿಸಿದ್ದಾರೆ.