ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ತಾರತಮ್ಯ: ವಿಶ್ವಸಂಸ್ಥೆಯ ಸಮಿತಿ ಕಳವಳ
ಹೊಸದಿಲ್ಲಿ, ಜ. 24: ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿವಾರಣಾ ಸಮಿತಿ (ಸಿಇಆರ್‌ಡಿ) ತೀವ್ರ ಕಳವಳ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯ ಸಂದರ್ಭ ಜನಾಂಗೀಯ ತಾರತಮ್ಯ, ಬಲವಂತದ ಒಕ್ಕಲೆಬ್ಬಿಸುವಿಕೆ, ದ್ವೇಷ ಭಾಷಣ ಹಾಗೂ ಕಾನೂನು ಜಾರಿ ಸಂಸ್ಥೆಗಳಿಂದ ಅತಿಯಾದ ಬಲ ಪ್ರಯೋಗವನ್ನು ಅದು ಉಲ್ಲೇಖಿಸಿದೆ.
ಸಿಇಆರ್‌ಡಿ 2026 ಜನವರಿ 19ರಂದು ಜಿನೇವಾದಲ್ಲಿರುವ ವಿಶ್ವ ಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಗೆ ಬರೆದ ಪತ್ರದಲ್ಲಿ ಈ ವಿಚಾರ ತಿಳಿಸಿದೆ. 2025 ಮೇ 12ರಂದು ಕಳುಹಿಸಲಾದ ಈ ಹಿಂದಿನ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಭಾರತ ಸರಕಾರ ಒದಗಿಸಿದ ಮಾಹಿತಿಯ ಕೊರತೆಗೆ ವಿಷಾದಿಸುತ್ತೇವೆ ಎಂದು ಅದು ಹೇಳಿದೆ. ಹಿಂದಿನ ಪತ್ರದಲ್ಲಿ ಅಸ್ಸಾಂನಲ್ಲಿ ಸಮುದಾಯದ ಹಕ್ಕುಗಳ ಉಲ್ಲಂಘನೆ ಆರೋಪದ ಕುರಿತು ಸ್ಪಷ್ಟೀಕರಣ ಕೋರಲಾಗಿತ್ತು ಎಂದು ಮಖ್ತೂಬ್ ಮೀಡಿಯಾ ವರದಿ ಮಾಡಿದೆ.
ಕಾರ್ಯವಿದಾನ, ಆಡಳಿತಾತ್ಮಕ ಸಮಸ್ಯೆಗಳು ಹಾಗೂ ದಾಖಲೆಗಳನ್ನು ಪಡೆಯುವಲ್ಲಿನ ತೊಂದರೆಗಳಿಂದಾಗಿದೆ ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಿಂದ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಹೊರಗಿಡುವ ಬಗ್ಗೆ ಸಮಿತಿ ಕಳವಳ ವ್ಯಕ್ತಪಡಿಸಿದೆ. ‘‘ಮೂಲ ನಿವಾಸಿಗಳಲ್ಲದವರು’’ ಎಂಬ ಅವರ ವರ್ಗೀಕರಣ ತೀವ್ರ ಪರಿಣಾಮ ಬೀರುತ್ತದೆ. ಆ ಪದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ ಎಂದು ಸಮಿತಿ ಗಮನ ಸೆಳೆದಿದೆ.
ಅದು ಕಟ್ಟುನಿಟ್ಟಿನ ಪರಿಶೀಲನಾ ಮಾನದಂಡಗಳು ಹಾಗೂ ತಮ್ಮ ಅನರ್ಹತೆಯನ್ನು ಪ್ರಶ್ನಿಸಲು ಸಂಶಯಾಸ್ಪದ ಮತದಾರರಿಗೆ ಅವಕಾಶ ನೀಡುವ ವಿದೇಶಿ ನ್ಯಾಯಮಂಡಳಿಯನ್ನು ಅಮಾನತಿನಲ್ಲಿರಿಸಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.
ಸಮರ್ಪಕ ವಸತಿ ಅಥವಾ ಪರಿಹಾರ ನೀಡದೆ ಹಲವು ಜಿಲ್ಲೆಗಳಲ್ಲಿ ವ್ಯವಸ್ಥಿತ ಬಲವಂತದ ಒಕ್ಕಲೆಬ್ಬಿಸುವಿಕೆ ವರದಿಗಳನ್ನು ಸಿಇಆರ್‌ಡಿ ಉಲ್ಲೇಖಿಸಿದೆ. ಈ ಬಲವಂತದ ಒಕ್ಕಲೆಬ್ಬಿಸುವಿಕೆ ಬಂಗಾಳಿ ಮಾತನಾಡುವ ಮುಸ್ಲಿಂ ಕುಟುಂಬಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ ಎಂದು ಅದು ಹೇಳಿದೆ.
ವಿಶೇಷವಾಗಿ ಅಸ್ಸಾಂನಲ್ಲಿ 2024 ರಾಷ್ಟ್ರೀಯ ಚುನಾವಣೆ ಸಂದರ್ಭ ದ್ವೇಷ ಭಾಷಣ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಹೆಚ್ಚಳವಾಗಿರುವ ಕುರಿತು ಅದು ಕಳವಳ ವ್ಯಕ್ತಪಡಿಸಿದೆ. ಇದರೊಂದಿಗೆ ಪೊಲೀಸರಿಂದ ಅತಿಯಾದ, ಮಾರಕ ಬಲ ಪ್ರಯೋಗ ಹಾಗೂ ನಾಗರಿಕರು, ಸಂಘಟಿತ ಗುಂಪುಗಳಿಂದ ಹಿಂಸಾತ್ಮಕ ದಾಳಿಯನ್ನು ಉಲ್ಲೇಖಿಸಿದೆ.