“ತಾಳ್ಮೆ ಫಲ ನೀಡಿತು”: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ
Photo credit: PTI
ಹೊಸದಿಲ್ಲಿ: ಅಮೆರಿಕ ಜೊತೆಗಿನ ಭಾರತದ ಐತಿಹಾಸಿಕ ವ್ಯಾಪಾರ ಒಪ್ಪಂದವು ನಿರಂತರ ತಾಳ್ಮೆಯ ಫಲಿತಾಂಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸುಂಕ ಮಾತುಕತೆಗಳ ಬಗ್ಗೆ ಹಿಂದಿನ ಟೀಕೆಗಳು ಸಕಾರಾತ್ಮಕ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದ್ದಾರೆ.
ಎನ್‌ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವ್ಯಾಪಾರ ಒಪ್ಪಂದವು ಅನುಕೂಲಕರ ಆರ್ಥಿಕ ವಾತಾವರಣವನ್ನು ಸೃಷ್ಟಿಸಿದೆ. ಜಾಗತಿಕ ವ್ಯಾಪಾರ ಮಾತುಕತೆಯಲ್ಲಿ ಸರಕಾರ ಅನುಸರಿಸುತ್ತಿರುವ ನಿರಂತರ, ಸಮತೋಲನಯುತ ಮತ್ತು ಸೂಕ್ತ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಜನರು ಸುಂಕಗಳ ಬಗ್ಗೆ ಟೀಕಿಸಿದರು, ನಾವು ತಾಳ್ಮೆಯಿಂದ ಮುಂದುವರಿದೆವು, ಅದರ ಫಲಿತಾಂಶಗಳು ಈಗ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವದ ಕ್ರಮವು ಬದಲಾಗುತ್ತಿದೆ. ಅದರ ಪಥವು ಭಾರತದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಿದೆ. ನಾನು ಇದನ್ನು ವಿವಿಧ ಜಾಗತಿಕ ವೇದಿಕೆಗಳಲ್ಲಿ ಹೇಳುತ್ತಾ ಬಂದಿದ್ದೇನೆ. ಇಂದು ಅನೇಕ ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳ ನಡುವೆಯೂ ಭಾರತವು ಪ್ರಯೋಜನ ಪಡೆಯುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.
ಸಭೆಗೆ ಮುಂಚಿತವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ವಿಶ್ವಾಸವು ಎಲ್ಲಾ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ನಮ್ಮ ನಾಗರಿಕರ ಈ ಶಕ್ತಿಯು, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ" ಎಂದು ಹೇಳಿದ್ದಾರೆ.