×
Ad

ಉತ್ತರಪ್ರದೇಶ | ಮೊಮೋಸ್ ಆಮಿಷವೊಡ್ಡಿ ಬಾಲಕನಿಂದ 85 ಲಕ್ಷದ ಚಿನ್ನ ಲಪಟಾಯಿಸಿದ ವಂಚಕರು!

Update: 2026-02-03 09:00 IST

ಲಕ್ನೋ: ಏಳನೇ ತರಗತಿಯ ಬಾಲಕನಿಗೆ ಬೇಕಾದಷ್ಟು ಮೊಮೋಸ್ ನೀಡುವುದಾಗಿ ಆಮಿಷವೊಡ್ಡಿ ಮನೆಯ ತಿಜೋರಿಯಲ್ಲಿ ಇಡಲಾಗಿದ್ದ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಎಗರಿಸಿರುವ ವಿಚಿತ್ರ ಘಟನೆ ಪೂರ್ವ ಉತ್ತರಪ್ರದೇಶದಿಂದ ವರದಿಯಾಗಿದೆ.  

ಹನ್ನೆರಡು ವರ್ಷದ ಬಾಲಕ ವಂಚಕರ ಬಲೆಗೆ ಬಿದ್ದು, ಮೊಮೋಸ್ ತಿನ್ನುವ ಆಸೆಯಿಂದ ಮನೆಯಲ್ಲಿದ್ದ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಬೀದಿಬದಿಯಲ್ಲಿ ಮೊಮೋಸ್ ಮಾರುತ್ತಿದ್ದ ವ್ಯಾಪಾರಿಗಳಿಗೆ ಹಸ್ತಾಂತರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಿಯೋರಿಯಾ ಸಮೀಪದ ದುಮಾರಿ ಚೌರಾಹಾ ಎಂಬಲ್ಲಿ ಈ ಘಟನೆ ನಡೆದಿದೆ. ಜೀವನ ಪರ್ಯಂತ ಉಚಿತವಾಗಿ ಮೊಮೋಸ್ ನೀಡುವುದಾಗಿ ಬಾಲಕನಿಗೆ ಆಸೆ ತೋರಿಸಿ ಮನೆಯಲ್ಲಿದ್ದ ಎಲ್ಲ ಚಿನ್ನ ತಂದುಕೊಡುವಂತೆ ಪುಸಲಾಯಿಸಿದ್ದರು ಎನ್ನಲಾಗಿದೆ.

ಮನೆಯ ಕಪಾಟಿನಲ್ಲಿದ್ದ ಚಿನ್ನ ಮಾಯವಾಗುವುದರೊಂದಿಗೆ ವಿಚಾರಣೆ ಆರಂಭವಾಗಿತ್ತು. ತಾಯಿ ಹಾಗೂ ಚಿಕ್ಕಮ್ಮ ಹುಡುಕಾಟ ಆರಂಭಿಸಿದರು. ಬಳಿಕ ಬಾಲಕನನ್ನು ವಿಚಾರಿಸಿದರು. ಜೀವನ ಪರ್ಯಂತ ಉಚಿತ ಆಹಾರ ನೀಡುವುದಾಗಿ ಭರವಸೆ ನೀಡಿದ್ದಕ್ಕಾಗಿ ಎಲ್ಲ ಚಿನ್ನಾಭರಣಗಳನ್ನು ನೀಡಿದ್ದಾಗಿ ಬಾಲಕ ತಂದೆಯ ಬಳಿ ಒಪ್ಪಿಕೊಂಡ.

ಅರ್ಚಕರಾಗಿದ್ದ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ವಿಚಾರಣೆ ನಡೆಸಿದಾಗ ಬಾಲಕನಿಗೆ ರಸ್ತೆಬದಿಯ ಮೋಮೊ ತಿನ್ನುವ ಚಪಲ ಇದ್ದುದು ಗೊತ್ತಾಯಿತು. ಬಾಲಕನಿಗೆ ಉಚಿತವಾಗಿ ತಿನ್ನಿಸುವ ಮೂಲಕ ಆರೋಪಿಗಳು ಆತನ ವಿಶ್ವಾಸ ಗಳಿಸಿದ್ದರು. ಬಳಿಕ ಆಹಾರ, ಬಿಡಿಗಾಸು ನೀಡುವ ಆಫರ್ ಕೂಡಾ ಬಂತು. ಕ್ರಮೇಣ ಬಾಲಕ ಮನೆಯಿಂದ ಚಿನ್ನಾಭರಣಗಳನ್ನು ತಂದುಕೊಡಲು ಆರಂಭಿಸಿದ ಎಂದು ಪೊಲೀಸರು ಹೇಳಿದ್ದಾರೆ. ಚಿನ್ನದ ನೆಕ್ಲೇಸ್, ಉಂಗುರ, ಬಳೆ, ಮೂಗುತಿ, ಬೆಳ್ಳಿಯ ಆಭರಣಗಳು ಹೀಗೆ ಒಂದೊಂದಾಗಿಯೇ ವ್ಯಾಪಾರಿಗಳ ಕೈಸೇರಿದವು.

ಇದನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕನಿಗೆ ಮೊಮೋ ಮಾರಾಟಗಾರರು ಬೆದರಿಕೆ ಹಾಕಿದ್ದಾಗಿಯೂ ಅರ್ಚಕ ಫೆ.1ರಂದು ದೂರು ನೀಡಿದ್ದರು. ಇಬ್ಬರು ವಂಚಕರ ಪತ್ತೆಗೆ ಪೊಲೀಸರು ಕೃಯಾಚರಣೆ ಪ್ರಾರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News