ಭಾರತಕ್ಕೆ ಸೇರಿದ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ನೀಡುವುದಿಲ್ಲ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ : ಸಿಂಧೂ ನದಿ ನೀರು ಒಪ್ಪಂದದ ಅಮಾನತು ಮುಂದುವರಿಸುವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ನದಿಗಳಿಂದ ಪಾಕಿಸ್ತಾನಕ್ಕೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಎಪ್ರಿಲ್ 22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರತ ಕೈಗೊಂಡಿತ್ತು.
ರಾಜಸ್ಥಾನದ ಬಿಕಾನೇರ್ನ ದೇಶ್ನೋಕ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದರು.
ಭಾರತಕ್ಕೆ ಸೇರಿದ ಒಂದು ಹನಿ ನೀರನ್ನು ಕೂಡ ಪಾಕಿಸ್ತಾನಕ್ಕೆ ನೀಡಲಾಗುವುದಿಲ್ಲ. ಭಾರತೀಯರ ರಕ್ತದ ಜೊತೆ ಆಟವಾಡುವುದರಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟವಾಗುತ್ತದೆ. ಇದು ಭಾರತದ ಸಂಕಲ್ಪ ಮತ್ತು ಈ ಬದ್ಧತೆಯಿಂದ ನಮ್ಮನ್ನು ತಡೆಯಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.