×
Ad

“ಅಸಂವಿಧಾನಿಕವಲ್ಲ”: 3 ಕ್ರಿಮಿನಲ್‌ ಕಾನೂನುಗಳ ಹಿಂದಿ ಹೆಸರುಗಳಿಗೆ ಸಂಸದೀಯ ಸಮಿತಿಯ ಒಪ್ಪಿಗೆ

Update: 2023-11-21 15:28 IST

Photo credit: PIB

ಹೊಸದಿಲ್ಲಿ: ಪ್ರಸ್ತಾವಿತ ಮೂರು ಕ್ರಿಮಿನಲ್‌ ಕಾನೂನುಗಳಿಗೆ ನೀಡಲಾಗಿರುವ ಹಿಂದಿ ಹೆಸರುಗಳು ಅಸಂವಿಧಾನಿಕವಲ್ಲ ಎಂದು ಹಿಂದಿ ಹೆಸರುಗಳ ವಿರುದ್ಧ ಕೇಳಿ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿ ರಾಜ್ಯ ಸಭೆಯಲ್ಲಿ ಮಂಡಿಸಿರುವ ತನ್ನ ವರದಿಯಲ್ಲಿ ತಿಳಿಸಿ ಈ ಮೂಲಕ ಈ ಹಿಂದಿ ಹೆಸರುಗಳಿಗೆ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ತನ್ನ ಅನುಮೋದನೆ ನೀಡಿದೆ.

ಭಾರತೀಯ ನ್ಯಾಯ ಸಂಹಿತ (ಬಿಎನ್‌ಎಸ್-‌2023), ಭಾರತೀಯ ನಾಗರಿಕ್‌ ಸುರಕ್ಷಾ ಸಂಹಿತ (ಬಿಎನ್‌ಎಸ್‌ಎಸ್-2023) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್‌ (ಬಿಎಸ್‌ಎ-2023) ಈಗಿನ ಇಂಡಿಯನ್‌ ಪೀನಲ್‌ ಕೋಡ್‌, 1860, ಕ್ರಿಮಿನಲ್‌ ಪ್ರೊಸೀಜರ್‌ ಆಕ್ಟ್‌ 1898 ಹಾಗೂ ಇಂಡಿಯನ್‌ ಎವಿಡೆನ್ಸ್‌ ಆಕ್ಟ್‌ 1872 ಬದಲು ಜಾರಿಗೆ ಬರಲಿವೆ.

“ಈ ಸಂಹಿತಗಳ ಪಠ್ಯವು ಆಂಗ್ಲ ಭಾಷೆಯಲ್ಲಿರುವುದರಿಂದ ಅವು ಸಂವಿಧಾನದ ವಿಧಿ 348ರ ನಿಬಂಧನೆಗಳ ಉಲ್ಲಂಘನೆಯಾಗುವುದಿಲ್ಲ. ಗೃಹ ವ್ಯವಹಾರಗಳ ಸಚಿವಾಲಯ ನೀಡಿದ ಪ್ರತಿಕ್ರಿಯೆಯಿಂದ ಸಮಿತಿಗೆ ಸಮಾಧಾನವಾಗಿದೆ ಹಾಗೂ ಪ್ರಸ್ತಾವಿತ ಕಾನೂನುಗಳಿಗೆ ನೀಡಲಾಗಿರುವ ಹೆಸರು ಸಂವಿಧಾನದ ವಿಧಿ 348 ಅನ್ನು ಉಲ್ಲಂಘಿಸುವುದಿಲ್ಲ,” ಎಂದು ಬಿಜೆಪಿ ಸಂಸದ ಬ್ರಜ್‌ಲಾಲ್‌ ಅವರ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಪ್ರಸ್ತಾವಿತ ಕ್ರಿಮಿನಲ್‌ ಕಾನೂನುಗಳಿಗೆ ಹಿಂದಿ ಹೆಸರುಗಳನ್ನು ನೀಡುವ ಕುರಿತು ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಹಾಗೂ ಡಿಎಂಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿವೆ.

ಮದ್ರಾಸ್‌ ಬಾರ್‌ ಅಸೋಸಿಯೇಶನ್‌ ಕೂಡ ಕೇಂದ್ರದ ಕ್ರಮವನ್ನು ಅಸಂವಿಧಾನಿಕವೆಂದು ಬಣ್ಣಿಸಿತ್ತಲ್ಲದೆ ಅದರ ವಿರುದ್ಧ ನಿರ್ಣಯ ಕೈಗೊಂಡಿತ್ತು.

ಸಂವಿಧಾನದ ವಿಧಿ 348 ಪ್ರಕಾರ ಮಸೂದೆಗಳು, ಕಾಯಿದೆಗಳು ಮತ್ತು ಅಧ್ಯಾದೇಶಗಳ ಪಠ್ಯವು ಆಂಗ್ಲ ಭಾಷೆಯಲ್ಲಿರಬೇಕೆಂದು ಹೇಳುವುದರಿಂದ ಈ ಕಾನೂನುಗಳ ಹೆಸರುಗಳು ಮಾತ್ರ ಹಿಂದಿಯಲ್ಲಿರುವುದರಿಂದ ಹಾಗೂ ಉಳಿದ ಅಂಶಗಳು ಆಂಗ್ಲ ಭಾಷೆಯಲ್ಲಿಯೇ ಇರುವುದರಿಂದ ಯಾವುದೇ ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News