×
Ad

ಸೇನೆಯ ಶೌರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ; ಗಡಿಯಲ್ಲಿಯ ವಾಯನೆಲೆಯಿಂದ ಪಾಕ್‌ಗೆ ‘ಲಕ್ಷಣ ರೇಖೆ’ಸಂದೇಶ ರವಾನೆ

Update: 2025-05-13 21:11 IST

 ನರೇಂದ್ರ ಮೋದಿ | PC : PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಆದಮ್‌ ಪುರ ವಾಯುನೆಲೆಯಿಂದ ‘ನೀವು ಭಾರತದ ಯಾವುದೇ ಮಿಲಿಟರಿ ನೆಲೆಗಳಿಗೆ ಹಾನಿಯನ್ನುಂಟು ಮಾಡುವುದರಲ್ಲಿ ವಿಫಲರಾಗಿದ್ದು ಮಾತ್ರವಲ್ಲ, ನಿಮ್ಮ ನೆಲದಿಂದ ಭಯೋತ್ಪಾದನೆಯು ಮುಂದುವರಿದರೆ ನಿಮ್ಮನ್ನು ನಿರ್ನಾಮ ಮಾಡಲಾಗುವುದು’ ಎಂಬ ಪ್ರಬಲ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದರು.

‘ಆಪರೇಷನ್ ಸಿಂಧೂರ’ದ ಬಳಿಕ ಸಶಸ್ತ್ರ ಪಡೆಗಳನ್ನುದ್ದೇಶಿಸಿ ಮಾಡಿದ ತನ್ನ ಮೊದಲ ಭಾಷಣದಲ್ಲಿ ಮೋದಿ, ನಾಲ್ಕು ದಿನಗಳ ಕಾರ್ಯಾಚರಣೆಯಲ್ಲಿ ಒಂಭತ್ತು ಭಯೋತ್ಪಾದಕ ತಾಣಗಳನ್ನು ನಾಶಗೊಳಿಸಿ ಎಂಟು ಮಿಲಿಟರಿ ಸ್ಥಾವರಗಳಿಗೆ ಹಾನಿಯನ್ನುಂಟು ಮಾಡುವ ಮೂಲಕ ಪಾಕಿಸ್ತಾನವು ಮಂಡಿಯೂರುವಂತೆ ಮಾಡಿದ್ದಕ್ಕಾಗಿ ಸೇನೆಯನ್ನು ಪ್ರಶಂಸಿಸಿದರು.

‘ಆಪ್ ನೆ ಜೋ ಕಿಯಾ ವೋ ಅಭೂತಪೂರ್ವ,ಅಕಲ್ಪನೀಯ ಔರ್ ಅದ್ಭುತ್ ಹೈ’ ಎಂದು ತನ್ನ 27 ನಿಮಿಷಗಳ ಭಾಷಣದಲ್ಲಿ ಮೋದಿ ಹೇಳಿದರು.

ಮೋದಿಯವರ ಭಾಷಣವು ಅವರು ಸೋಮವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ್ದ ಭಾಷಣದ ಸಂದೇಶವನ್ನು ಪ್ರತಿಧ್ವನಿಸಿತ್ತಾದರೂ ಅದು ತುಂಬ ಮಹತ್ವದ್ದಾಗಿತ್ತು. ಪಾಕಿಸ್ತಾನದ ಗಡಿಯಿಂದ ಕೇವಲ 100 ಕಿ.ಮೀ.ಅಂತರದಲ್ಲಿರುವ, ಎಸ್-400 ಕ್ಷಿಪಣಿ ಉಡಾವಕಗಳೊಂದಿಗೆ ತಾನು ನಾಶಗೊಳಿಸಿದ್ದೇನೆ ಎಂದು ಪಾಕಿಸ್ತಾನವು ಬಡಾಯಿ ಕೊಚ್ಚಿಕೊಂಡಿದ್ದ ಆದಮ್‌ಪುರ ವಾಯುನೆಲೆಯಿಂದ ಅವರು ಈ ಭಾಷಣವನ್ನು ಮಾಡಿದ್ದಾರೆ. ಭಾರತವು ಈ ಹೇಳಿಕೆಯನ್ನು ತಳ್ಳಿ ಹಾಕಿತ್ತು ಮತ್ತು ಮೋದಿಯವರನ್ನು ಹಿಂಬಾಲಿಸಿದ್ದ ಟಿವಿ ಕ್ಯಾಮೆರಾಗಳೂ ಅದನ್ನು ದೃಢಪಡಿಸಿದವು.

‘ಆಪರೇಷನ್ ಸಿಂಧೂರ’ ಈಗ ಪಾಕಿಸ್ತಾನಕ್ಕೆ ಸ್ಪಷ್ಟವಾದ ‘ಲಕ್ಷಣ ರೇಖೆ’ಯನ್ನು ಎಳೆದಿದೆ ಎಂದು ಮೋದಿ ಹೇಳಿದರು.

ಮಂಗಳವಾರ ಬೆಳಿಗ್ಗೆ ಯಾವುದೇ ಪೂರ್ವಸೂಚನೆಯಿಲ್ಲದೆ ಆದಮ್‌ ಪುರಕ್ಕೆ ಆಗಮಿಸಿದ್ದ ಮೋದಿ ವಾಯುನೆಲೆಯಲ್ಲಿ ಸುತ್ತಾಡಿ ‘ಭಾರತ ಮಾತಾ ಕಿ ಜೈ’ ಎಂಬ ಘೋಷಣೆಯನ್ನು ಕೂಗುತ್ತಿದ್ದ ವಾಯುಪಡೆ ಯೋಧರನ್ನು ಅಭಿನಂದಿಸಿದರು.

ಯೋಧರೊಂದಿಗೆ ಸಂವಾದದ ಬಳಿಕ ಎಸ್-400 ಸಿಸ್ಟಮ್‌ ನ ಹಿನ್ನೆಲೆಯಲ್ಲಿ ವೆಸ್ಟರ್ನ್ ಏರ್ ಕಮಾಂಡ್‌ ನ ಟ್ರೇಡ್‌ ಮಾರ್ಕ್ ತ್ರಿಶೂಲವನ್ನು ಕಸೂತಿ ಮಾಡಲಾಗಿದ್ದ ಕ್ಯಾಪ್ ಧರಿಸಿ ಭಾಷಣವನ್ನು ಮಾಡಿದ ಮೋದಿ,‘‘ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನದ ಪರಮಾಣು ಬೆದರಿಕೆಯನ್ನು ಠುಸ್ಸೆನಿಸಿದಾಗ ನಮ್ಮ ಶತ್ರುಗಳು ‘ಭಾರತ ಮಾತಾ ಕೀ ಜೈ’ನ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಾರೆ ’’ ಎಂದರು.

‘ಭಾರತ ಮಾತಾ ಕೀ ಜೈ ಕೇವಲ ಘೋಷಣೆಯಲ್ಲ, ಅದು ನಮ್ಮ ಯೋಧರು ತಮ್ಮ ಜೀವಗಳನ್ನು ದೇಶಕ್ಕಾಗಿ ಅರ್ಪಿಸಲು ಮಾಡುವ ಪ್ರತಿಜ್ಞೆ. ನಮ್ಮ ಡ್ರೋನ್‌ ಗಳು ಮತ್ತು ಕ್ಷಿಪಣಿಗಳು ಶತ್ರುಗಳನ್ನು ಅಪ್ಪಳಿಸಿದಾಗ ಅವರು ‘ಭಾರತ ಮಾತಾ ಕೀ ಜೈ’ ಅನ್ನು ಕೇಳುತ್ತಾರೆ ’ಎಂದ ಮೋದಿ,‘ನಿಮ್ಮ ಶೌರ್ಯದ ಕಥೆಗಳು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಲಿವೆ. ನಮ್ಮ ಸೇನೆ, ವಾಯುಪಡೆ ಮತ್ತು ನೌಕಾಪಡೆ ಸಿಬ್ಬಂದಿಗಳಿಗೆ ನಾನು ವಂದಿಸುತ್ತೇನೆ’ ಎಂದು ಹೇಳಿದರು.

ಭಾರತದ ಮೇಲೆ ಕೆಟ್ಟ ದೃಷ್ಟಿಯನ್ನು ಬೀರಿದರೆ ತಮ್ಮ ಸರ್ವನಾಶವಾಗುತ್ತದೆ ಎನ್ನುವುದನ್ನು ಭಯೋತ್ಪಾದನೆಯ ಪೋಷಕರು ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಆದಮ್‌ ಪುರ ಭಾರತದ ಎರಡನೇ ಅತಿ ದೊಡ್ಡ ವಾಯುನೆಲೆಯಾಗಿದ್ದು, ರಫೇಲ್ ಮತ್ತು ಮಿಗ್-29 ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಈ ವಾಯುನೆಲೆಯು ಪಾಕಿಸ್ತಾನದ ಜೊತೆ 1969 ಮತ್ತು 1971ರ ಯುದ್ಧಗಳಲ್ಲಿಯೂ ಮಹತ್ವದ ಪಾತ್ರವನ್ನು ನಿರ್ವಹಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News