×
Ad

ಭಾರತದ್ದೇ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡಲಿದ್ದೇವೆ: ಪ್ರಧಾನಿ ಮೋದಿ ಘೋಷಣೆ

Update: 2025-08-15 17:12 IST

 ನರೇಂದ್ರ ಮೋದಿ | PC : PTI 

ಹೊಸದಿಲ್ಲಿ: ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ನಾವು ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲಿದ್ದೇವೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ದಿಲ್ಲಿಯ ಕೆಂಪುಕೋಟೆಯಲ್ಲಿ ಆಯೋಜನೆಗೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಸಾಧನೆಯ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತಿದೆ. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಮರಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಭಾರತಕ್ಕೇ ನೇರವಾಗಿ ಮರಳಲಿದ್ದಾರೆ” ಎಂದು ಆಶಾವಾದ ವ್ಯಕ್ತಪಡಿಸಿದರು.

ವಾಣಿಜ್ಯ ಉದ್ದೇಶದ ಆಕ್ಷಿಯಂ-4 ಮಿಷನ್ ನ ಭಾಗವಾಗಿ ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು 18 ದಿನಗಳ ಬಾಹ್ಯಾಕಾಶ ಯಾನ ಮುಗಿಸಿ ಭೂಮಿಗೆ ಮರಳಿದ್ದಾರೆ. ಅವರೆಲ್ಲ ಜುಲೈ 15ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊ ಕರಾವಳಿಯಲ್ಲಿ ಇಳಿದಿದ್ದರು.

ಈ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, “ಎಲ್ಲ ಕ್ಷೇತ್ರಗಳಂತೆ ಬಾಹ್ಯಾಕಾಶ ವಲಯದಲ್ಲೂ ಸ್ವಾವಲಂಬಿಯಾಗಲು ಭಾರತ ಶ್ರಮಿಸುತ್ತಿದ್ದು, ‘ಗಗನಯಾನ’ ಉಡಾವಣೆಗೆ ಸಜ್ಜಾಗುತ್ತಿದೆ” ಎಂದು ತಿಳಿಸಿದರು.

‘ಗಗನಯಾನ’ ಮಾನವನನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಯೋಜನೆಯ ಗಗನ ನೌಕೆಯಾಗಿದೆ.

“ಕೇಂದ್ರ ಸರಕಾರ ಇತ್ತೀಚಿನ ದಿನಗಳಲ್ಲಿ ತಂದಿರುವ ಸುಧಾರಣಾ ಕ್ರಮಗಳಿಂದ 300ಕ್ಕೂ ಅಧಿಕ ನವೋದ್ಯಮಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಕ್ರಿಯಗೊಂಡಿವೆ. ಸಾವಿರಾರು ಯವಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಇದು ನಮ್ಮ ಯುವಕರ ಸಾಮರ್ಥ್ಯ, ನಾವು ನಮ್ಮ ಯುವ ಸಮೂಹದ ಮೇಲೆ ಇರಿಸಿರುವ ವಿಶ್ವಾತಸದ ದ್ಯೋತಕ” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News