ಹಿಮಾಚಲ ಪ್ರದೇಶ: ಮೈಕೊರೆಯುವ ಚಳಿಯಲ್ಲೂ ಒಡೆಯನ ಶವದ ಬಳಿಯಿಂದ ನಾಲ್ಕು ದಿನ ಕದಲದೇ ನಿಂತ ಶ್ವಾನ
PC: x.com/venom1s
ಚಾಂಬಾ: ಪಾದಮಂಜಿನಲ್ಲಿ ಹೂತಹೋದ ಸ್ಥಿತಿಯಲ್ಲಿ, ಹಸಿವು–ನೀರಡಿಕೆಯನ್ನು ಲೆಕ್ಕಿಸದೇ ಮೈಕೊರೆಯುವ ಚಳಿಯ ನಡುವೆಯೂ ತನ್ನ ಒಡೆಯನ ಶವದ ಬಳಿಯಿಂದ ನಾಲ್ಕು ದಿನಗಳ ಕಾಲ ಕದಲದೇ ನಿಂತ ಶ್ವಾನವೊಂದು ಅಪರೂಪದ ನಿಷ್ಠೆ ತೋರಿದ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ.
ಪಿಟ್ಬುಲ್ ತಳಿಯ ‘ಜೋನು’ ತನ್ನ ಒಡೆಯನ ಮೇಲೆ ತೋರಿದ ನಿಷ್ಠೆ ಹೃದಯ ಕಲುಕುವಂತಿದೆ. ಸೋಮವಾರ ಐಎಎಫ್ ಪೈಲಟ್ಗಳು ಹಾಗೂ ಪರ್ವತ ರಕ್ಷಣಾ ತಂಡಗಳು ವೀಕ್ಷಿತ್ (18) ಮತ್ತು ಪಿಯೂಷ್ (13) ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗ, ಹಿಮಾಚಲ ಪ್ರದೇಶದ ಚಾಂಬಾ ಜಿಲ್ಲೆಯ ಬೆಟ್ಟದ ತುದಿಯಲ್ಲಿ ಹಿಮದಡಿ ಸಿಲುಕಿ ಮೃತಪಟ್ಟಿರುವುದು ಪತ್ತೆಯಾಯಿತು. ಶವಗಳ ಪಕ್ಕದಲ್ಲೇ ಜೋನು ನಿತ್ರಾಣ ಸ್ಥಿತಿಯಲ್ಲೂ ಕಾವಲು ಕಾಯುತ್ತಿರುವುದು ಗಮನಕ್ಕೆ ಬಂದಿದೆ.
ಶವ ಪತ್ತೆಯಾದ ನಂತರವೂ ಅರ್ಧಗಂಟೆಗೂ ಹೆಚ್ಚು ಕಾಲ ಪಿಟ್ಬುಲ್ ಅಲ್ಲಿಯೇ ನಿಂತಿತ್ತು. ರಕ್ಷಣಾ ತಂಡಗಳು ಅದನ್ನು ಸ್ಥಳಾಂತರಿಸಲು ಪ್ರಯತ್ನಿಸಿದರೂ ಜೋನು ಕದಲಲಿಲ್ಲ. ಕ್ರಮೇಣ ರಕ್ಷಣಾ ತಂಡದ ಸದಸ್ಯರೇ ಎಂದು ಖಚಿತಗೊಂಡ ಬಳಿಕ ಮಾತ್ರ ತನ್ನ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿತು.
ದೂರದಿಂದ ನಿಂತು ಕೂಡ ಜೋನು ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿತ್ತು. ಈ ದುರಂತ ಘಟನೆಯ ಕುರಿತ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಣಾ ತಂಡದವರು ಯುವಕರ ದುರಂತ ಸಾವಿನ ಜೊತೆಗೆ ಶ್ವಾನದ ಅಪಾರ ನಿಷ್ಠೆಯಿಂದ ದಿಗ್ಭ್ರಾಂತರಾಗಿದ್ದಾರೆ. ವೀಕ್ಷಿತ್ ಮತ್ತು ಪಿಯೂಷ್ ಚಾಂಬಾ ಪಟ್ಟಣದಿಂದ ಸುಮಾರು 60 ಕಿಲೋಮೀಟರ್ ದೂರದ ಮಲ್ಕೋಟಾ ಗ್ರಾಮದವರು.
ಗ್ರಾಮದ ಸರಪಂಚ ಸಂಜೀವ್ ಕುಮಾರ್ ಅವರ ಪ್ರಕಾರ, ವೀಕ್ಷಿತ್ ಅವರ ತಂದೆ ಸಂಜಯ್ ರಾಣಾ ತಮ್ಮ ಸಂಬಂಧಿಕರಿಂದ ಪಿಟ್ಬುಲ್ ಶ್ವಾನವನ್ನು ಖರೀದಿಸಿ ಈ ಇಬ್ಬರು ಯುವಕರಿಗೆ ಉಡುಗೊರೆಯಾಗಿ ನೀಡಿದ್ದರು. ಜೋನು ಜತೆಗೆ ಇನ್ನೊಂದು ಶ್ವಾನವೂ ವೀಕ್ಷಿತ್ ಮತ್ತು ಪಿಯೂಷ್ ಜತೆ ಚಾರಣಕ್ಕೆ ತೆರಳಿದ್ದರೂ, ಅದು ಇನ್ನೂ ಪತ್ತೆಯಾಗಿಲ್ಲ.