ಒಡಿಶಾ | ಚರ್ಚ್‌ನಲ್ಲಿ ಪ್ರಾರ್ಥನೆಗೆ ಅಡ್ಡಿ ಆರೋಪ: ಉದ್ವಿಗ್ನ ಸ್ಥಿತಿ
PC: TOI
ಭುವನೇಶ್ವರ/ ಕೊರಾಪುಟ್ : ಪ್ರಾರ್ಥನೆ ಮಾಡಲು ಅಡ್ಡಿಪಡಿಸುವ ಜತೆಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾಗಿ ಕ್ರೈಸ್ತ ಸಮುದಾಯದವರು ಆಪಾದಿಸಿದ ಬೆನ್ನಲ್ಲೇ ನಬರಂಗಪುರ ಜಿಲ್ಲೆಯ ಕಪೇನಾ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಈ ತಿಂಗಳ 25ರಂದು ಕಿಡಿಗೇಡಿಗಳ ಗುಂಪೊಂದು ಪ್ರಾರ್ಥನಾ ಸೇವೆಗೆ ಅಡ್ಡಿಪಡಿಸಿ, 30 ಆದಿವಾಸಿ ಕ್ರಿಶ್ಚಿಯನ್ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ಆಪಾದಿಸಲಾಗಿದೆ.
ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಿ, ಕ್ರೈಸ್ತಧರ್ಮದಲ್ಲಿ ಮುಂದುವರಿದರೆ ಗ್ರಾಮದಿಂದ ಉಚ್ಚಾಟಿಸಿ ಚರ್ಚ್ ಕಟ್ಟಡವನ್ನು ಧ್ವಂಸಗೊಳಿಸುವುದಾಗಿ ಗುಂಪು ಬೆದರಿಕೆ ಹಾಕಿದೆ ಎಂದು ಕ್ರೈಸ್ತಸಮುದಾಯದವರು ದೂರಿದ್ದಾರೆ. "ನಾವು ಪ್ರಾರ್ಥನೆಯನ್ನು ಏಕೆ ನಿಲ್ಲಿಸಬೇಕು ಎಂದು ಕೇಳಿದಾಗ, ಆರೋಪಿಗಳು ಚರ್ಚ್ ಕಟ್ಟಡಕ್ಕೆ ಹೊರಗಿನಿಂದ ಬೀಗ ಜಡಿದು ಪ್ರತಿಯೊಬ್ಬರೂ ಅಲ್ಲಿಂದ ತೆರಳುವಂತೆ ಬಲವಂತಪಡಿಸಲಾಯಿತು ಎಂದು ಸ್ಥಳೀಯ ನಿವಾಸಿ ತೂನಾ ಸಾಂತಾ ಎಂಬವರು ದೂರಿದ್ದಾರೆ.
ಸೋಮವಾರ ಇದೇ ಸಮುದಾಯದ ಇಬ್ಬರು ಯುವಕರಾದ ಜಲಂಧರ್ ಸಾಂತಾ ಹಾಗೂ ಮೋಹನ್ ಸಾಂತಾ ಅವರ ಮೇಲೆ ಗುಂಪು ಹಲ್ಲೆ ನಡೆಸಿದೆ ಎಂದು ಆಪಾದಿಸಲಾಗಿದೆ.
ಉಮೆರ್ಕೋಟೆ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಲಾಗಿದೆ ಎಂದು ಸಮುದಾಯದವರು ಹೇಳಿದ್ದಾರೆ. ಎರಡು ಗುಂಪುಗಳ ನಡುವಿನ ಸಂಘರ್ಷದಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಎರಡೂ ಗುಂಪುಗಳ ಜನರನ್ನು ಒಳಗೊಂಡ ಶಾಂತಿ ಸಮಿತಿಯನ್ನು ರಚಿಸಲಾಗಿದ್ದು, ಉಪವಿಭಾಗಾಧಿಕಾರಿ ಪ್ರಕಾಶ್ ಕುಮಾರ್ ಮಿಶ್ರಾ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹೇಶ್ವರ ಸ್ವೈನ್ ವಿವರಿಸಿದ್ದಾರೆ.