×
Ad

ಮೊಯಿತ್ರಾರನ್ನು ಲೋಕಸಭೆಯಿಂದ ಉಚ್ಚಾಟಿಸಲು ರಾಜಕೀಯ ಪಿತೂರಿ: ಕಾಂಗ್ರೆಸ್

Update: 2023-12-05 21:36 IST

ಮಹುವಾ ಮೊಯಿತ್ರಾ Photo:PTI

ಹೊಸದಿಲ್ಲಿ: ಪ್ರಶ್ನೆ ಕೇಳಲು ಹಣ ಸ್ವೀಕರಿಸಿದ್ದಾರೆ ಎಂಬ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾರನ್ನು ಲೋಕಸಭೆಯಿಂದ ಉಚ್ಚಾಟಿಸುವ ಪ್ರಸ್ತಾವವನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಸೋಮವಾರ ಹೇಳಿದೆ. ಇದೊಂದು ‘‘ರಾಜಕೀಯ ಪಿತೂರಿ’’ಯಾಗಿದೆ ಎಂದು ಅದು ಬಣ್ಣಿಸಿದೆ.

‘‘ನಮ್ಮ ನಿಲುವು ಸ್ಪಷ್ಟವಾಗಿದೆ. ಇದು ಮಹುವಾ ಮೊಯಿತ್ರಾಗೆ ಕಿರುಕುಳ ನೀಡುವುದಕ್ಕಾಗಿ ರೂಪಿಸಲಾಗಿರುವ ರಾಜಕೀಯ ಸಂಚಾಗಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು. ‘‘ಮೊಯಿತ್ರಾರನ್ನು ಅಮಾನತುಗೊಳಿಸಲು ಅಥವಾ ಉಚ್ಚಾಟಿಸಲು ಸರಕಾರ ತರುವ ಯಾವುದೇ ಪ್ರಸ್ತಾವವನ್ನು ನಾವು ವಿರೋಧಿಸುತ್ತೇವೆ’’ ಎಂದು ಅವರು ಹೇಳಿದರು.

ತೃಣಮೂಲ ಕಾಂಗ್ರೆಸ್ ಸಂಸದೆಯನ್ನು ಉಚ್ಚಾಟಿಸಲು ಶಿಫಾರಸು ಮಾಡುವ ತನ್ನ ವರದಿಯನ್ನು ಲೋಕಸಭಾ ನೈತಿಕತೆ ಸಮಿತಿಯು ಶೀಘ್ರವೇ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.

ಸಂಸತ್‌ನಲ್ಲಿ ಅದಾನಿ ಗುಂಪಿನ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಉದ್ಯಮಿ ದರ್ಶನ್ ಹೀರಾನಂದಾನಿಯಿಂದ ಲಂಚ ಸ್ವೀಕರಿಸಿದ್ದಾರೆ ಎಂಬುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಮೊಯಿತ್ರಾರ ಪರಿತ್ಯಕ್ತ ಸಂಗಾತಿ ಎನ್ನಲಾದ ವಕೀಲ ಜೈ ಅನಂತ್ ದೇಹದ್ರಾಯ್ ಆರೋಪಿಸಿದ್ದಾರೆ.

ನೈತಿಕತೆ ಸಮಿತಿಯ ವರದಿ ಬಗ್ಗೆ ಚರ್ಚೆಯಾಗಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದು ರಮೇಶ್ ಹೇಳಿದರು. ‘‘ವಿವಿಧ ಸಂಸದರು ಮಾಧ್ಯಮಗಳ ಮೂಲಕ ಮೊಯಿತ್ರಾರ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ. ಅವುಗಳಿಗೆ ಪ್ರತಿಕ್ರಿಯಿಸಲು ಅವರಿಗೆ ಅವಕಾಶ ನೀಡಬೇಕೆಂದು ನಾವು ಬಯಸುತ್ತೇವೆ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News